ಚಿರಶ್ರೀ ಅಂಚನ್ ಮೂಲತಃ ಕರಾವಳಿಯವರು. ತುಳು ಚಿತ್ರರಂಗದಿಂದ ಬಣ್ಣದ ಪಯಣ ಆರಂಭಿಸಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾ ಮಾಡಿದರೂ ಕಾಡುವ ಕಥೆಗಳ ಭಾಗವಾಗಿದ್ದಾರೆ. ಸವಾಲೆನಿಸುವ ಪಾತ್ರಗಳಿಗೆ ಜೀವತುಂಬುತ್ತಾ ಸೈ ಎನಿಸಿಕೊಂಡು ಬರುತ್ತಿರುವ ಇವರೀಗ, ಇನಾಮ್ದಾರ್ (Inamdar) ಚಿತ್ರದಿಂದ ಮತ್ತೆ ಸಂಚಲನ ಮೂಡಿಸಲು ಹೊರಟಿದ್ದಾರೆ. ಬುಡಕಟ್ಟು ಜನಾಂಗದ ಜನರ ರಕ್ಷಣೆಗೆ ನಿಲ್ಲುವ ಮೂಲಕ ನಟಿ ಚಿರಶ್ರೀ ಅಂಚನ್ (Chirasree Anchan) ಸುದ್ದಿ ಕೇಂದ್ರ ತಲುಪಿದ್ದಾರೆ.
ಬಯಲು ಸೀಮೆ ಹಾಗೂ ಪಶ್ಚಿಮ ಘಟ್ಟಗಳ ಎರಡು ಜನಾಂಗಗಳ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ನಿರ್ದೇಶಕ ಸಂದೇಶ್ ಶೆಟ್ಟಿ (Sandesh Shetty Azri) ಇನಾಮ್ದಾರ್ ಚಿತ್ರವನ್ನಾಗಿಸಿದ್ದಾರೆ. ಇದರಲ್ಲಿ ಭುವಿ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡಿರುವ ಚಿರಶ್ರೀ, ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹುಡುಗಿಯಾಗಿ ಕಾಣಸಿಗಲಿದ್ದಾರೆ. ಕಾಡಿನಲ್ಲಿ ತಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳುವ ದಿಟ್ಟ ನಾಯಕಿಯ ಪಾತ್ರವನ್ನು ನಿಭಾಯಿಸಿದ್ದು ತಮ್ಮೊಟ್ಟಿಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ನಾಲ್ಕೈದು ಸೀನ್ ಬಂದು ಹೋಗುವ ಪಾತ್ರ ನಿಭಾಯಿಸಲು ನಂಗಿಷ್ಟವಿಲ್ಲ ಎನ್ನುವ ಚಿರಶ್ರೀ, ಸ್ಕೋಪ್ ಇರುವ ಪಾತ್ರಗಳನ್ನು, ಅಭಿನಯಕ್ಕೆ ಅವಕಾಶವಿರುವ ಕ್ಯಾರೆಕ್ಟರ್ ಗಳನ್ನೇ ಎದುರು ನೋಡ್ತಾರಂತೆ. ಆ ದಾಟಿಯಲ್ಲಿ ಸಿಕ್ಕಂತಹ ಸಿನಿಮಾವೇ ಇನಾಮ್ದಾರ್ ಅಂತೆನ್ನುವ ನಟಿ ಚಿರಶ್ರೀ ಅಂಚನ್, ‘ಭುವಿ’ ಪಾತ್ರದಿಂದ ತನ್ನ ವೃತ್ತಿಬದುಕು ಬದಲಾಗಬಹುದು. ಬಿಗ್ ಬ್ರೇಕ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಅಂದ್ಹಾಗೆ, ಭುವಿ ಪಾತ್ರಕ್ಕಾಗಿ ನಟಿ ಚಿರಶ್ರೀ ಅಂಚನ್ ಸಾಕಷ್ಟು ಶ್ರಮವಹಿಸಿದ್ದಾರೆ. ಮಳೆ ಗಾಳಿ ಎನ್ನದೇ ಬೆಟ್ಟ- ಗುಡ್ಡ ಹತ್ತಿ ಶೂಟಿಂಗ್ ಮಾಡಿದ್ದಾರೆ. ದಟ್ಟ ಕಾಡಲ್ಲಿ ಬರಿಗಾಲಲ್ಲೇ ಚೇಸ್ ಸೀಕ್ವೆನ್ಸ್ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಚಿರಶ್ರೀ ಕಾಲಿಗೆ ಕಲ್ಲು ತಾಗಿ ದೊಡ್ಡ ಮಟ್ಟದ ಗಾಯ ಆಗಿತ್ತಂತೆ. ಹಾಗಂತ, ಬ್ರೇಕ್ ಪಡೆಯದೇ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡೇ ಪಾತ್ರ ಪೋಷಣೆ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ಹೇಳಿಕೊಳ್ಳುವ ಚಿರಶ್ರೀ, ಭುವಿ ಪಾತ್ರ ಮನಸ್ಸಿಗೆ ನೆಮ್ಮದಿ ಮತ್ತು ಸಾರ್ಥಕತೆ ತಂದುಕೊಟ್ಟಿದೆ ಅಂತಾರೇ.
ಇದೇ ಅಕ್ಟೋಬರ್ 27 ರಂದು ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿರುವ, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಿಸಿರುವ ಇನಾಮ್ದಾರ್ ಬಿಡುಗಡೆಯಾಗ್ತಿದೆ. ಈ ಚಿತ್ರ ರಿಲೀಸ್ ಗಾಗಿ ಎದುರುನೋಡ್ತಿರುವ ಚಿರಶ್ರೀ, ಬಿಗ್ ಬಾಸ್ ಖ್ಯಾತಿಯ ಶಶಿ ಜೊತೆ ‘ಪ್ರೇಮಿಗಳ ಗಮನಕ್ಕಾಗಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾವೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಪರೂಪದ ಕಥಾಹಂದರವುಳ್ಳ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]