BagalkotDistrictsKarnatakaLatest

ನೆಹರುಗೆ ಪ್ರಧಾನಿ ಆಗೋ ಅರ್ಜೆಂಟ್ ಇತ್ತು, ಅದಕ್ಕೆ ಭಾರತವನ್ನ ತುಂಡು ಮಾಡಿದ್ರು: ಮಾಜಿ ಎಂಎಲ್‍ಸಿ ಭಾಂಡಗೆ

ಬಾಗಲಕೋಟೆ:ನೆಹರುಗೆ ದೇಶದ ಪ್ರಧಾನಿ ಆಗೋದು ಭಯಂಕರ ಅರ್ಜೆಂಟ್ ಇತ್ತು. ಅದಕ್ಕಾಗಿ ಭಾರತವನ್ನು ತುಂಡು ಮಾಡಿದರು ಎಂದು ಮಾಜಿ ಎಂಎಲ್‍ಸಿ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದ ಸಿಎಎ ಪರ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಂಡಗೆ, ಆ ಹೊತ್ತಿನಿಂದ ಹತ್ತಿದ ಪೀಡಾ ಇವತ್ತಿಗೂ ಹೋಗುತ್ತಿಲ್ಲ. ಹಿಂದುಸ್ತಾನ ಪಾಕಿಸ್ತಾನ ಮಾಡಿದರು. ಅದನ್ನಾದರೂ ಸರಿಯಾಗಿ ಮಾಡಿದ್ರಾ ಅದನ್ನು ಮಾಡಲಿಲ್ಲ. ಅಲ್ಲಿಯವರು ಅಲ್ಲಿ ಇಲ್ಲಿಯವರು ಇಲ್ಲಿ ಅಂತ ಸರಿಯಾಗಿ ಗೆರೆ ಕೊರೆದರಾ ಅದು ಮಾಡಲಿಲ್ಲ ಅಂತ ಟೀಕಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇನೂ ಇಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಕಟ್ಟಿದ ಸಂಘಟನೆ ಕಾಂಗ್ರೆಸ್ ಪಕ್ಷ. ಅದು ರಾಜಕೀಯ ಪಕ್ಷ ಆಗಿರಲಿಲ್ಲ. ಆಗ ಏನು ಜೆಡಿಎಸ್ ಇತ್ತಾ? ಆರ್‌ಎಸ್‌ಎಸ್ ಇರಲಿಲ್ಲ, ಜನಸಂಘ ಇರಲಿಲ್ಲ ಎಂದು ಟಾಂಗ್ ಕೊಟ್ಟರು.

ಇದು ಮಹಾತ್ಮಾ ಗಾಂಧಿಯ ಕಾಂಗ್ರೆಸ್ ಅಲ್ಲ. ಆ ಕಾಂಗ್ರೆಸ್ ಅವರ ಜೊತೆಗೇನೆ ಸತ್ತು ಹೋಯ್ತು ಅಂತ ಕುಟುಕಿದರು. ಇದು ಗೋಪಾಲಕೃಷ್ಣ ಗೋಖಲೆ ಕಾಂಗ್ರೆಸ್ ಅಲ್ಲ. ಬಾಲಗಂಗಾಧರ ತಿಲಕ್ ಅವರ ಕಾಂಗ್ರೆಸ್ ಅಲ್ಲ. ಸುಭಾಸ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ ಕಾಂಗ್ರೆಸ್ ಅಲ್ಲ ಅಂತ ಕೈ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು.

ದೇಶದ್ರೋಹಿಗಳನ್ನ ಜೈಲಿಗೆ ಕಳಿಸಿ ಅಂದ್ರೆ ಕಾಶಪ್ಪನವರಗೆ ಯಾಕೆ ಸಿಟ್ಟು ಅಂತ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶ್ಪನವರ ವಿರುದ್ಧ ಹರಿಹಾಯ್ದರು. ಕಾಶಪ್ಪನವರೆ ನನ್ನ ಮೇಲೆ ಕೇಸು ಹಾಕು ಅಂತಿದ್ದೀರಿ. ಆದರೆ ನನ್ನ ಮೇಲೆ ಯಾಕೆ ಕೇಸು ಹಾಕಬೇಕು? ನಾನೇನಾದ್ರೂ ಬೆಂಗಳೂರಲ್ಲಿ ಬಾರ್ ನೊಳಗೆ ಜಗಳ ಮಾಡಿ ಕೇಸ್ ಹಾಕ್ಕೊಂಡಿಲ್ಲ ಎನ್ನುವ ಮೂಲಕ ಕಾಶಪ್ಪನವರ ಸ್ಕೈಬಾರ್ ಪ್ರಕರಣ ನೆನಪಿಸಿ ಟಾಂಗ್ ಕೊಟ್ಟರು. ಕಾಶಪ್ಪನವರೆ ನಾವು ಮುಸ್ಲಿಂ ವಿರೋಧಿಗಳು ಅಲ್ಲ. ಈ ದೇಶದ ಎಲ್ಲ ಮುಸಲ್ಮಾರು ಭಾರತದವರು. ನಾವು ದೇಶದ್ರೋಹಿಗಳನ್ನ ಜೈಲಿಗೆ ಹಾಕಿ ಅಂದ್ರೆ ನಿಮಗೇಕೆ ಸಿಟ್ಟು ಅಂತ ಭಾಂಡಗೆ ಹರಿಹಾಯ್ದರು.

Leave a Reply

Your email address will not be published. Required fields are marked *

Back to top button