ಮೈಸೂರು: ಆ ಹಳ್ಳಿ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸೋ ಗ್ರಾಮ. ಗ್ರಾಮದಲ್ಲಿ ಒಳ್ಳೆ ರಸ್ತೆ ಉಂಟು, ಚರಂಡಿ, ಕುಡಿಯಲು ನೀರು, ಅಂಗನವಾಡಿ, ಶಾಲೆ ಎಲ್ಲಾ ಉಂಟು. ಆದರೂ ಆ ಊರಿನ ಜನರಿಗೆ ಕಳೆದ ಎಂಟತ್ತು ವರ್ಷದಿಂದ ನೆಮ್ಮದಿ ಇಲ್ಲ.
ಸಿಎಂ ಸಿದ್ದರಾಮಯ್ಯನವರ ತವರು ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳ್ಳಿ ಸೋಮೇಶ್ವರಪುರ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವೂ ಇದೆ. ಆದ್ರೆ ಅಕ್ರಮ ಮದ್ಯ ಮಾರಾಟದಿಂದ ಊರಿನ ಜನರ ನೆಮ್ಮದಿಯೇ ಹಾಳಾಗಿ ಹೋಗಿದೆ.
Advertisement
Advertisement
ಸೋಮೇಶ್ವರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಲಿ ಮಾಡಿ 300 ರೂ. ಗಳಿಸಿದ್ರೆ ಅದ್ರಲ್ಲಿ 200 ರೂ. ಹಣವನ್ನು ಮದ್ಯಕ್ಕಾಗಿ ಬಳಕೆ ಮಾಡ್ತಿದ್ದಾರೆ. ಮಾತ್ರವಲ್ಲದೇ ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ತೊಂದ್ರೆ ಕೊಡ್ತಿದ್ದಾರೆ. ಇದರಿಂದ ಇಲ್ಲಿನ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥ ಮಹೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ರು.
Advertisement
ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲೂ ಮದ್ಯ ಮಾರಾಟವಿಲ್ಲ. ಹೀಗಾಗಿ ಮದ್ಯಪಾನಿಗಳು ಇಲ್ಲಿಗೆ ಬಂದು ಮದ್ಯ ಖರೀದಿಸುತ್ತಾರೆ. ಹೀಗೆ ಕೂಲಿ ಕಾರ್ಮಿಕರು ತಾವು ದುಡಿದ ದುಡ್ಡನ್ನೆಲ್ಲಾ ಮದ್ಯಕ್ಕೆ ಸುರಿಯುತ್ತಿದ್ದು, ಹಲವರ ಸಂಸಾರ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಯುವಕರೂ ದಾರಿ ತಪ್ಪುತ್ತಿದ್ದಾರೆ. ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರು ಹೋರಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮದ ನಿವಾಸಿ ಗುರು ಮಲ್ಲೇಶ್ ಅಳಲು ತೋಡಿಕೊಂಡ್ರು.
Advertisement
ಒಟ್ಟಾರೆ ಸಿಎಂ ತವರು ಕ್ಷೇತ್ರದ ಗ್ರಾಮವೊಂದರ ಕಥೆ ಹೀಗಾದ್ರೆ ಉಳಿದ ಪ್ರದೇಶಗಳ ಸ್ಥಿತಿಯೇನು ಅನ್ನೋದೇ ಜನಸಾಮಾನ್ಯರ ಮುಂದಿರುವ ಪ್ರಶ್ನೆಯಾಗಿದೆ. ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಅಂತ ಕಾದು ನೋಡ್ಬೇಕು.