ಧಾರವಾಡ: ಆಸ್ತಿವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಶಾಂತಿ ನಗರದಲ್ಲಿ ನಡೆದಿದೆ.
ಯಲ್ಲವ್ವ ನಾಯ್ಕರ್, ಭಾರತಿ ಪತಂಗಿ, ಪ್ರದೀಪ್ ಪತಂಗಿ ಎಂಬವರು ಗಂಭೀರವಾಗಿ ಗಾಯಗೊಂಡರು. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಯಲ್ಲವ್ವಾ ನಾಯ್ಕರ್ ಮತ್ತು ಮಗಳು ಭಾರತಿ ಪಂತಂಗಿ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗವಾಡ ಗ್ರಾಮದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಹುಬ್ಬಳ್ಳಿಗೆ ಕೆಲಸವನ್ನು ಅರಿಸಿಕೊಂಡು ಬಂದಿದ್ದರು.
ಆದ್ರೆ ಯಲ್ಲವ್ವಾರ ಪತಿಗೆ ಇಬ್ಬರು ಹೆಂಡತಿಯರು. ಯಲ್ಲವ್ವಾ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು ಹೀಗಾಗಿ ಯಲ್ಲವ್ವಾ ಪತಿಯ ಹೆಸರಲ್ಲಿ ಇದ್ದ 14 ಎಕರೆ ಜಮೀನು ವಿವಾದ ಸವದತ್ತಿ ಕೋರ್ಟ್ ನಲ್ಲಿತ್ತು. ಕಾರಣ ಸವದತ್ತಿ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶ ನೀಡಿದ್ದು ಯಲ್ಲವ್ವಾರಿಗೆ ನ್ಯಾಯಾಲಯ ಹೆಚ್ಚಿನ ಭಾಗವನ್ನು ನೀಡಿ ಆದೇಶ ಮಾಡಿತ್ತು. ಇದನ್ನು ಸಹಿಸದ ಯಲ್ಲವ್ವಾರಂಡನ ಮೊದಲ ಪತ್ನಿಯ ಮಗ ಈ ಕೃತ್ಯ ಮಾಡಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.
ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.