ಚಿಕ್ಕಮಗಳೂರು: ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಜನ ಮಲಗುತ್ತಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.
ಉಗ್ಗೇಹಳ್ಳಿಯ ಹೇಮಾವತಿ ನದಿ ತಟದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಪ್ರತಿ ಮಳೆಗಾಲದಲ್ಲೂ ಈ ಗ್ರಾಮದೊಳಗೆ ಹೇಮಾವತಿ ನದಿ ಹರಿಯುತ್ತದೆ. ಮನೆಯ ಗೋಡೆ ಹಾಗೂ ನೆಲದ ತಂಪನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳುವುದಕ್ಕೆ ಅಸಾಧ್ಯ. ಅದಕ್ಕಾಗಿ ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿಯನ್ನು ಹರಡುತ್ತಾರೆ. ಭೂಮಿಯ ಬಿಸಿ ಹೆಚ್ಚಾದ ಮೇಲೆ ಮಲಗುತ್ತಾರೆ.
ಕಳೆದ ಐವತ್ತು ವರ್ಷಗಳಿಂದ ಮಳೆ ಸುರಿಯುವ ವರ್ಷಗಳಲ್ಲಿ ಗ್ರಾಮಸ್ಥರು ಈ ರೀತಿ ಬದುಕುತ್ತಿದ್ದಾರೆ. ಗ್ರಾಮವನ್ನು ಸ್ಥಳಾಂತರಿಸಿ ಎಂದು ಮಾಡಿದ ಮನವಿ ಪತ್ರಗಳಿಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ. ಮಳೆ ಹೆಚ್ಚಾಗಿ ಸುರಿದರೆ ಈ ಗ್ರಾಮವೇ ಜಲಾವೃತಗೊಳ್ಳುತ್ತದೆ. ನೀರು ಮನೆಯೊಳಗೂ ಬರುತ್ತೆ ಹಾಗೂ ಮನೆಯೊಳಗಿಂದಲೂ ಉಕ್ಕುತ್ತೆ. ಪ್ರತಿ ಮಳೆಗಾಲದಲ್ಲೂ ಗ್ರಾಮಸ್ಥರು ನೆಮ್ಮದಿಯ ನಿದ್ದೆ ಇಲ್ಲದೆ ಭಯದಿಂದ ರಾತ್ರಿ ಕಳೆಯುತ್ತಾರೆ.
ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಾರು ತೊಂದರೆ ಜೊತೆ ಅನಾರೋಗ್ಯ ಕೂಡ ಹೆಚ್ಚಾಗುತ್ತದೆ. ಮಳೆಗಾಲ ಬಂದರೆ ಈ ಗ್ರಾಮದವರಿಗೆ ಶೀಥ, ಜ್ವರ ಸೇರಿದಂತೆ ಹಲವು ಸಮಸ್ಯೆ ಎದುರಾಗುತ್ತಿದ್ದು, ಆಸ್ಪತ್ರೆಗೆ ಹೋಗುವುದು ಮಾಮೂಲಿಯಾಗುತ್ತದೆ. ಕಳೆದ ಐವತ್ತು ದಶಕಗಳಿಂದ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಬದುಕುತ್ತಿರುವ ಈ ಗ್ರಾಮಸ್ಥರು ನಮ್ಮನ್ನು ಸ್ಥಳಾಂತರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.