ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಾರಿಯಲ್ಲಿ ಸಾಗುತ್ತಿದೆ: ಸಿಎಂ

Public TV
2 Min Read
CM Siddaramaiah Congress DemocracyDay

– ಮೇಲ್ಜಾತಿ, ಕೆಳಜಾತಿ ಇರೋ ತನಕ ರಾಜಕೀಯ ಪ್ರಜಾಪ್ರಭುತ್ವ ಅಸಾಧ್ಯ
– ಕಷ್ಟ ಆದ್ರೂ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು

ಬೆಂಗಳೂರು: ನಮ್ಮ ಸರ್ಕಾರ ಸಮಾನತೆ ಸಾಧಿಸಿದೆ ಎಂದು ಹೇಳುವುದಿಲ್ಲ. ಆದರೆ ಸಮಾನತೆ ಸಾಧಿಸುವ ದಾರಿಯಲ್ಲಿ ಸಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ವಿಧಾನಸೌಧದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ (Democracy Day ) ವೇಳೆ ಅವರು ಮಾತನಾಡಿದರು. ಈ ವೇಳೆ, ಮೇಲ್ಜಾತಿ ಹಾಗೂ ಕೆಳಜಾತಿ ಎನ್ನುವ ತಾರತಮ್ಯ ಇರುವ ತನಕ ರಾಜಕೀಯ ಪ್ರಜಾಪ್ರಭುತ್ವ ಬರಲು ಸಾಧ್ಯವಿಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಜಾಪ್ರಭುತ್ವ ಇಲ್ಲದೇ ಬದುಕುವುದು ಅಸಾಧ್ಯ. ಇದಕ್ಕಾಗಿ ಸಂವಿಧಾನದ ಪೀಠಿಕೆ ಅರ್ಥ ಮಾಡಿಕೊಳ್ಳಬೇಕು. ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸಿ ಅರ್ಥ ಮಾಡಿಸುವ ಕೆಲಸ ಆಗುತ್ತಿದೆ. ಸಂವಿಧಾನದ ಬಗ್ಗೆ ಗೊತ್ತಿಲ್ಲದವರು ಸಮ ಸಮಾಜ ನಿರ್ಮಿಸಲಾರರು ಎಂದು ಹೇಳಿದ್ದಾರೆ.

ಹಿಂದೆ ಸಿಎಂ ಆಗಿದ್ದಾಗ ಎಲ್ಲಾ ಧರ್ಮದ ಬಡವರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಈ ಬಾರಿ ಪಂಚ ಗ್ಯಾರಂಟಿ ಜಾರಿ ಮಾಡಿ, ಬಡವ, ಹಿಂದುಳಿದ, ದಲಿತರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಇದನ್ನು ಟೀಕೆ ಮಾಡೋರು ವಿಚ್ಛಿದ್ರಕಾರಿ ಶಕ್ತಿಗಳು. ಸಮಾನತೆ ಹೆಸರಲ್ಲಿ ಸಮಾಜ ಒಡೆಯುವವರು ಇದ್ದಾರೆ. ಈ ಸಮಾಜ ಒಡೆಯೋರನ್ನು, ವಿಚ್ಛಿದ್ರಕಾರಿ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ವಿಭಜಕ ಶಕ್ತಿಗಳು ಸಂವಿಧಾನ ನಿಷ್ಕ್ರಿಯ ಮಾಡಲು ಯತ್ನಿಸಿವೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವಕಾಶ ವಂಚಿತರಿಗೆ ಸಮಾನತೆ ಸಿಗಬೇಕು. ಮಹಿಳೆಯರಿಗೆ ಹೆಚ್ಚು ಒತ್ತು ಕೊಟ್ಟು ಗ್ಯಾರಂಟಿಗಳನ್ನು ರೂಪಿಸಿದ್ದೇವೆ. ರಾಜ್ಯದಲ್ಲಿ ಮೂರೂವರೆ ಕೋಟಿ ಮಹಿಳೆಯರಿದ್ದಾರೆ. 287 ಕೋಟಿ ಮಹಿಳೆಯರು ಇಲ್ಲಿಯವರೆಗೆ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. 1.67 ಲಕ್ಷ ಜನರಿಗೆ ಇಂಧನ ಇಲಾಖೆಯಿಂದ 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯದಲ್ಲಿ 5 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದೇವೆ. ಇದು ಕೇಂದ್ರದಿಂದ ಕೊಡುತ್ತಿರುವ ಅಕ್ಕಿ ಎಂದು ಬಿಜೆಪಿಗರು ಹೇಳುತ್ತಾರೆ. ಕೇಂದ್ರಕ್ಕೆ ತೆರಿಗೆ ಕೊಡೋರು ಯಾರು? ನಮ್ಮ ಜನ, ಈ ತೆರಿಗೆ ಹಣ ಮೋದಿಯವರದ್ದಲ್ಲ, ನಡ್ಡಾದಲ್ಲ, ಬಿಜೆಪಿ ಇರೋ ರಾಜ್ಯಗಳಲ್ಲಿ ಬಿಜೆಪಿ ಯಾಕೆ ಹಾಗಾದ್ರೆ ಅಕ್ಕಿ ಕೊಡ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಬಾಕಿ ಇದೆ. ಈ ಬಿಜೆಪಿ ಶಕ್ತಿಗಳು ಬಡವರ, ಕೆಳವರ್ಗದವರ, ದಲಿತರ ವಿರೋಧಿಗಳು. ಪ್ರಜಾಪ್ರಭುತ್ವ ಬುಡಮೇಲು ಮಾಡಿ ಏಕತೆ ಹೆಸರಲ್ಲಿ ಬಹುತ್ವ ಹಾಳು ಮಾಡಲು ಹೊರಟಿದ್ದಾರೆ. ಈ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ಬಿಟ್ಟರೆ ದೇಶ, ರಾಜ್ಯ ನಾಶ ಆಗುತ್ತೆ. ಕಷ್ಟ ಆದರೂ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಇವತ್ತು 20 ಲಕ್ಷಕ್ಕೂ ಹೆಚ್ಚು ಜನ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಮಾನವ ಸರಪಳಿ ಮಾಡಲಾಗಿದೆ. ಈ ಮೂಲಕ ಸಂವಿಧಾನದ ಆಶಯ ತಿಳಿಸುವ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

Share This Article