Connect with us

ಪ್ಯಾಂಟ್ ಹಾಳು ಮಾಡಿದ್ದಕ್ಕೆ ಹಗ್ಗದಿಂದ ಕಟ್ಟಿ ಮಕ್ಕಳ ಮೇಲೆ ತಂದೆಯಿಂದ್ಲೇ ಹಲ್ಲೆ

ಪ್ಯಾಂಟ್ ಹಾಳು ಮಾಡಿದ್ದಕ್ಕೆ ಹಗ್ಗದಿಂದ ಕಟ್ಟಿ ಮಕ್ಕಳ ಮೇಲೆ ತಂದೆಯಿಂದ್ಲೇ ಹಲ್ಲೆ

ಜೈಪುರ: ಪ್ಯಾಂಟ್ ಹಾಳು ಮಾಡಿದ್ದಕ್ಕೆ ಮಕ್ಕಳ ಮೇಲೆ ತಂದೆಯೇ ಅಮಾನುಷವಾಗಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜ್ಸಾಮಂದ್ ಜಿಲ್ಲೆಯ ದಿಯೋಘರ್ ಪೊಲೀಸ್ ಠಾಣೆಯ ವ್ಯಾಪ್ತಿಯಡಿಯಲ್ಲಿ ಬರುವ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಂದೆ ಚೈನ್ ಸಿಂಗ್ ರಾಬತ್ ಎಂದು ಗುರುತಿಸಿದ್ದು, ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೀನಾ ಕೃತ್ಯವನ್ನು ರೆಕಾರ್ಡ್ ಮಾಡಿದ ಸಹೋದರ ವತ್ತಾ ಸಿಂಗ್‍ನನ್ನು ಕೂಡ ಬಂಧಿಸಲಾಗಿದೆ.

ಎರಡು ದಿನಗಳ ಹಿಂದೆ ಮಕ್ಕಳು ತಂದೆಯ ಪ್ಯಾಂಟ್ ಹಾಳು ಮಾಡಿದ್ದಾರೆ. ಇದರಿಂದ ಕೋಪಗೊಂಡು ಕ್ರೂರ ತಂದೆ 5 ವರ್ಷದ ಮಗನನ್ನು ಹಗ್ಗದಿಂದ ಕಟ್ಟಿ ಫ್ಯಾನಿಗೆ ನೇತಾಕಿ ಹೊಡೆದಿದ್ದಾನೆ. ಇದನ್ನು ನೋಡಿ 3 ವರ್ಷದ ಮಗಳು ಭಯದಿಂದ ಹೆದರಿ ಮುಖ ಮುಚ್ಚಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದೆ. ಆದರೆ ಪಾಪಿ ಅಪ್ಪ ಆ ಮಗುವನ್ನು ಬಿಡದೆ ಹಲ್ಲೆ ಮಾಡಿದ್ದಾನೆ.

ತಂದೆಯ ಸಹೋದರ ಮಕ್ಕಳಿಗೆ ಸಹಾಯ ಮಾಡದೆ ಮಾನವೀಯತೆ ಇಲ್ಲದೆ ಹಲ್ಲೆ ಮಾಡಿದ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಮತ್ತು ಒಡಹುಟ್ಟಿದವರು ಏನು ಮಾಡಲು ಸಾಧ್ಯವಾಗದೆ ಭಯದಿಂದ ನೋಡುತ್ತಾ ನಿಂತಿದ್ದರು.

ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಸ್ವಲ್ಪ ಸಮಯದಲ್ಲೇ ವೈರಲ್ ಆಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥ ಭಾವ್ನಾ ಪಾಲಿಮಾಲ್ ಅವರು ಮಂಗಳವಾರ ಆರೊಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಮಾಹಿತಿ ಪಡೆದು ಮಕ್ಕಳನ್ನು ರಕ್ಷಿಸಿ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಆರೋಪಿ ತಂದೆ ವಿರುದ್ಧ ಮಕ್ಕಳ ಮೇಲಿನ ಕ್ರೌರ್ಯದ ಅಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.