ಮೈಸೂರು: ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ಮರಿ ಕಡಿದು ಬಾಡೂಟ ಹಾಕಿಸಿದ್ದೆವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈಶ್ವರಪ್ಪ, ವಿಶ್ವನಾಥ್ ಜೊತೆ ವೇದಿಕೆ ಹಂಚಿಕೊಂಡಿದ್ದ ಸಿದ್ದರಾಮಯ್ಯ ಅವರು ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ನಾನು ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ. ನಾನು ಅಂತಿಮ ವರ್ಷದಲ್ಲಿದಾಗ ವಿಶ್ವನಾಥ್ ಪ್ರಥಮ ವರ್ಷದಲ್ಲಿದ್ದನು. ಇಬ್ಬರೂ ಸೇರಿ ಕಾಳಿದಾಸ ವಿದ್ಯಾರ್ಥಿ ಸಂಘ ಕಟ್ಟಿದ್ದೆವು. ಅದಕ್ಕೆ ನಾನು ಅಧ್ಯಕ್ಷ, ವಿಶ್ವನಾಥ್ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ. ಆಗ ಮೈಸೂರಿನಲ್ಲಿ ಓದುತ್ತಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳ ಸರ್ವೆ ಮಾಡಿಸಲು ಉದ್ದೇಶಿಸಿದ್ದೆವು. ಒಂದು ದಿನ ಮರಿ ಕಡಿದು ಬಾಡೂಟ ಮಾಡಿಸಿದ್ದೆವು. ವಿದ್ಯಾರ್ಥಿ ದೆಸೆಯಿಂದಲೇ ನಾವಿಬ್ಬರೂ ಒಟ್ಟಿಗೆ ಬೆಳೆದಿದ್ದೇವೆ ಎಂದು ಹಳೆ ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ
Advertisement
Advertisement
ನಮ್ಮ ನಡುವೆ ವೈರತ್ವ ಇಲ್ಲ, ವಿರೋಧ ಮಾತ್ರವಿದೆ. ಎಲ್ಲಕ್ಕಿಂತಾ ಮಾನವೀಯ ಸಂಬಂಧ ಮುಖ್ಯ. ನಮ್ಮ ನಡುವೆ ವೈಯುಕ್ತಿಕ ವೈರುತ್ವ ಏನೂ ಇಲ್ಲ. ನಾನು, ವಿಶ್ವನಾಥ್ ಆಸ್ತಿ ಹಂಚಿಕೊಳ್ಳಬೇಕಿಲ್ಲ. ಈಶ್ವರಪ್ಪ ಆಗಾಗ ನನ್ನ ವಿರುದ್ಧ ಟೀಕೆ ಮಾಡ್ತನೆ. ನಾನೂ ಅವನ ವಿರುದ್ಧ ಮಾತನಾಡಿದ್ದೇನೆ. ನಾನೊಂದು ಪಕ್ಷದಲ್ಲಿ ಇದ್ದೇನೆ, ಅವನೊಂದು ಪಕ್ಷದಲ್ಲಿ ಇದ್ದಾನೆ. ನಾನು ಕಾಂಗ್ರೆಸ್, ಅವನು ಬಿಜೆಪಿ. ನಾನು ಚುನಾವಣೆಗೆ ನಿಂತಾಗ ಅವನು ನನ್ನ ಸೋಲಿಸೋಕೆ ಬರ್ತಾನೆ. ಅವನು ನಿಂತಾಗ ನಾನು ಸೋಲಿಸೋಕೆ ಹೋಗ್ತೀನಿ. ಆದರೆ ವೈಯುಕ್ತಿಕವಾಗಿ ಚೆನ್ನಾಗಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.