ಬಳ್ಳಾರಿ: ಸಾಲಮನ್ನಾದ ಹೆಸರಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಈ ನೆಪದಲ್ಲಿ ರಾಜಕೀಯ ಆಟ ಮಾಡಿಕೊಂಡು ಅಪ್ಪ ಮಕ್ಕಳು ಆಡಳಿತ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ 46 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುತ್ತೇವೆ ಎಂದರು. ಎಲ್ಲಿ ಸಾಲಮನ್ನಾವಾಗಿದೆ? ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದು 9 ತಿಂಗಳು ಕಳೆದಿದೆ. ಆದ್ರೆ ಈವರೆಗೆ ಕೇವಲ 4.5 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ನೆಪದಲ್ಲಿ ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ರಾಜ್ಯದಲ್ಲಿ ರಾಜಕೀಯ ಆಟ ಆಡಿಕೊಂಡು ಅಪ್ಪ ಮಕ್ಕಳು ಆಡಳಿತ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ದೇವೇಗೌಡರು ಕೊನೆಗಳಿಗೆಯವರೆಗೂ ಕಾದು ನಂತರ ತುಮಕೂರಿನಲ್ಲಿ ಸ್ಪರ್ಧೆ ಮಾಡುವಂತಾಗಿದೆ ಎಂದು ಟೀಕಿಸಿದರು.
Advertisement
Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಂದಾಗಿರುವುದು ಬಿಜೆಪಿಗೆ ವರದಾನವಾಗಿದೆ. ಈ ವಿಚಾರವೇ ನಾವು ಹೆಚ್ಚು ಸೀಟು ಗೆಲ್ಲಲು ಲಾಭವಾಗುತ್ತದೆ. ಕಲ್ಬುರ್ಗಿಯಲ್ಲಿ ನೂರಕ್ಕೂ ನೂರರಷ್ಟು ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದಲ್ಲಿ 300ಕ್ಕೂ ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಮಂಡ್ಯ ಸೇರಿದಂತೆ 22 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಾನು 1,800 ಕೋಟಿ ಹಣ ಕೇಂದ್ರ ನಾಯಕರಿಗೆ ನೀಡಿದ್ದೇನೆ ಅಂತಾ ರಾಹುಲ್ ಹೇಳುತ್ತಿರುವುದು ಶೋಭೆ ತರಲ್ಲ. ಹಣ ನೀಡಿರುವುದನ್ನು ಬಹಿರಂಗಪಡಿಸಿ. ಆಗ ನಾನು ರಾಜಕೀಯ ನಿವೃತ್ತಿ ಪಡೆಯುತ್ತೆನೆ. ಇಲ್ಲದಿದ್ದರೆ ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Advertisement
ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಎನೂ ಅಂತಾ ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ. ಅಂಬರೀಶ್ ಇದ್ದಾಗ ಅವರ ಪರವಾಗಿದ್ದು, ಅವರು ನಿಧನರಾದ ನಂತರ ಪಾರ್ಥಿವ ಶರೀರ ತಗೆದುಕೊಂಡು ಹೋಗಿದ್ದರು. ಇದೀಗ ಅವರ ಕೊಡುಗೆ ಎನು ಎಂದು ಪ್ರಶ್ನೆ ಮಾಡುವುದು ಜನರು ಗಮನಿಸುತ್ತಿದ್ದಾರೆ. ಸುಮಲತಾ ಹಾಗೂ ಚಿತ್ರನಟರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ನಾವು ಸುಮಲತಾರಿಗೆ ಬೆಂಬಲ ನೀಡುತ್ತೇವೆ ಎಂದರು.
2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಅಲೆ ಹೆಚ್ಚಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಶ್ರೀರಾಮುಲು ಸೇರಿದಂತೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಆದರಿಂದ ಭಾರಿ ಅಂತರದಿಂದ ಬಳ್ಳಾರಿಯಲ್ಲಿ ಗೆಲುವು ಸಾಧಿಸುತ್ತೇವೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸರ್ಕಾರ ಉಳಿಯಲ್ಲ. 22 ಸ್ಥಾನ ಗೆದ್ದ ನಂತರ ನೀವೇ ನೋಡಿ ಎಂದರು.