ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ನಿರಂತರವಾಗಿ ಪ್ರಹಾರ ನಡೆಸಿ ರಕ್ತಪಾತ ಮಾಡಿ ಎಂದು ಕಾಶ್ಮೀರದ ಮುಜಾಹಿದೀನ್‍ಗಳಿಗೆ ಅಲ್-ಖೈದಾ ಮುಖ್ಯಸ್ಥ ಕರೆ ನೀಡಿದ್ದಾನೆ.
ಅಲ್-ಖೈದಾದ ಮಾಧ್ಯಮ ಘಟಕ ಬಿಡುಗಡೆ ಮಾಡಿರುವ ‘ಡೋಂಟ್ ಫರ್ಗೆಟ್ ಕಾಶ್ಮೀರ್’ ಎಂಬ 14 ನಿಮಿಷಗಳ ವಿಡಿಯೊದಲ್ಲಿ ಮುಖ್ಯಸ್ಥ ಆಯ್ಮಾನ್-ಅಲ್-ಜವಾಹಿರಿ ಭಾರತದ ಆರ್ಥಿಕತೆಗೆ ಧಕ್ಕೆಯಾಗುವಂತೆ ದಾಳಿ ಮಾಡಿ ಎಂದು ಹೇಳಿದ್ದಾನೆ.
ಈ ಹಂತದಲ್ಲಿ ಕಾಶ್ಮೀರದಲ್ಲಿರುವ ಮುಜಾಹಿದೀನ್(ಹೋರಾಟಗಾರರು)ಗಳು ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ಪ್ರಬಲ ಪ್ರಹಾರ ಮಾಡುವತ್ತ ಗಮನ ಹರಿಸಬೇಕು. ಇದರಿಂದ ಭಾರತೀಯ ಆರ್ಥಿಕತೆಗೆ ಧಕ್ಕೆಯಾಗಬೇಕು. ಭಾರತ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ಮಾನವಸಂಪನ್ಮೂಲ ಮತ್ತು ಉಪಕರಣಗಳು ನಷ್ಟವಾಗಬೇಕು ಎಂದು ಜವಾಹಿರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾನೆ.
ಕಾಶ್ಮೀರದಲ್ಲಿ ನಡೆಯುತ್ತಿರುವುದು ಪ್ರತ್ಯೇಕ ಹೋರಾಟ ಮಾತ್ರವಲ್ಲ. ಅದು ವಿಶ್ವಾದ್ಯಂತ ವ್ಯಾಪಕ ಶಕ್ತಿಗಳ ವಿರುದ್ಧ ಮುಸ್ಲಿಂ ಸಮುದಾಯ ನಡೆಸುತ್ತಿರುವ ಜಿಹಾದ್(ಧರ್ಮ ಹೋರಾಟ) ಒಂದು ಭಾಗವಾಗಿದೆ. ಈ ಸಂದೇಶವನ್ನು ಭಾರತದಲ್ಲಿರುವ ಮುಸ್ಲಿಂ ಸಮುದಾಯಗಳಿಗೆ ಪ್ರಸಾರ ಮಾಡಿ ಎಂದು ಅಲ್-ಖೈದಾ ಮುಖ್ಯಸ್ಥ ಇಸ್ಲಾಮ್ ವಿದ್ವಾಂಸರಿಗೆ ಕರೆ ನೀಡಿದ್ದಾರೆ.
ಕಾಶ್ಮೀರ, ಫಿಲಿಪೈನ್ಸ್, ಚೆಚನ್ಯಾ, ಮಧ್ಯ ಏಷ್ಯಾ, ಇರಾಕ್, ಸಿರಿಯಾ, ಅರೇಬಿಯಾ, ಸೊಮಾಲಿಯಾ, ತುರ್ಕಿಸ್ತಾನ್ ಭಾಗಗಳಲ್ಲಿ ಜಿಹಾದ್‍ಗೆ ಬೆಂಬಲ ನೀಡುವುದು ಎಲ್ಲ ಮುಸ್ಲಿಮರ ಕರ್ತವ್ಯ. ಮುಸ್ಲಿಮರ ನಾಡುಗಳಿಂದ ಮುಸ್ಲಿಮೇತರ ಆಡಳಿತ ತೊಲಗಿಸುವಷ್ಟು ಶಕ್ತಿ ಸಿಗುವವರೆಗೂ ಮುಸ್ಲಿಮರು ಮುಜಾಹಿದೀನ್ ಗಳ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬ ಸಂದೇಶವನ್ನು ನೀವೆಲ್ಲಾ ರವಾನಿಸಬೇಕು ಎಂದು ಜವಾಹಿರಿ ಆದೇಶಿಸಿದ್ದಾನೆ.
ಅಮೆರಿಕದ ಕೈಗೊಂಬೆ: ಇದೇ ವೇಳೆ, ಪಾಕಿಸ್ತಾನೀ ಸೇನೆ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅಮೆರಿಕದ ಕೈಗೊಂಬೆ ಎಂದು ಜರಿದಿದ್ದಾನೆ. ಹಾಗೆಯೇ, ತಾಲಿಬಾನ್ ಉಗ್ರ ಸಂಘಟನೆಯಂತೆಯೇ ಪಾಕಿಸ್ತಾನೀ ಸರ್ಕಾರ ಮತ್ತು ಸೇನೆ ಕೆಲಸ ಮಾಡುತ್ತಿದೆ ಎಂದೂ ಜವಾಹಿರಿ ಆರೋಪಿಸಿದ್ದಾನೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟನ್ನು ನಿರ್ವಹಿಸುತ್ತಿವೆ. ಅರಬ್‍ನ ಮುಜಾಹಿದೀನ್ ಪಡೆಯು ಕಾಶ್ಮೀರಕ್ಕೆ ಬರುವುದನ್ನು ತಡೆದಿದ್ದು, ಪಾಕಿಸ್ತಾನವೇ ಎಂದು ಅಲ್-ಖೈದಾ ಮುಖ್ಯಸ್ಥ ಕಿಡಿಕಾರಿದ್ದಾರೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಡಬಲ್ ಗೇಮ್ ಆಡಿದೆ ಎಂದು ಜವಾಹಿರಿ ದೂರಿದ್ದಾನೆ.
ಕಾಶ್ಮೀರದಲ್ಲಿ ಮುಜಾಹಿದೀನ್‍ಗಳು ಭಾರತೀಯ ಸೇನೆ ಮತ್ತು ಸರ್ಕಾರದ ಆಸ್ತಿಗಳ ಮೇಲಷ್ಟೇ ದಾಳಿ ಮಾಡಬೇಕೇ ಹೊರತು ಮುಸ್ಲಿಮರಿಗೆ ಸೇರಿದ ಮಸೀದಿ, ಮಾರುಕಟ್ಟೆ ಮೊದಲಾದ ಸ್ಥಳಗಳನ್ನು ಗುರಿಯಾಗಿಸಬಾರದು ಎಂದು ಮನವಿ ಮಾಡಿದ್ದಾನೆ.
ಕಾಶ್ಮೀರದಲ್ಲಿ ಹೊರಗಿನಿಂದ ಒಳನಸುಳುವವರ ಪ್ರಮಾಣದಲ್ಲಿ ಶೇ.43ರಷ್ಟು ಇಳಿಕೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಗೃಹ ಸಚಿವಾಲಯ ಸಂಸತ್‍ನಲ್ಲಿ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲೇ ಅಲ್-ಖೈದಾ ಸಂಘಟನೆ ಈ ವಿಡಿಯೋ ಬಿಡುಗಡೆ ಮಾಡಿದೆ.