ರಾಹುಲ್ ಹೇಳಿಕೆ ಉಲ್ಲೇಖಿಸಿ ಪಾಕಿನಿಂದ ವಿಶ್ವಸಂಸ್ಥೆಯಲ್ಲಿ ದೂರು

Public TV
2 Min Read
imran and rahul

– ದೂರು ನೀಡಿದ ಬೆನ್ನಲ್ಲೇ ಪಾಕ್ ವಿರುದ್ಧ ರಾಹುಲ್ ಕಿಡಿ
– ಕಾಶ್ಮೀರದ ಹಿಂಸಾಚಾರಕ್ಕೆ ಪಾಕ್ ಕಾರಣ
– ಪಾಕ್ ವಿಶ್ವದ್ಯಾಂತ ಉಗ್ರರನ್ನು ಪಸರಿಸುತ್ತಿದೆ

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿದೆ.

ಪಾಕಿಸ್ತಾನ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಿಜಾರಿ ಅವರು ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿ, ಜಮ್ಮು ಕಾಶ್ಮೀರದಲ್ಲಿ 35ಎ ಹಾಗೂ 370ನೇ ವಿಧಿ ರದ್ದುಪಡಿಸಿದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಈ ಕುರಿತು ಭಾರತದ ಪ್ರಮುಖ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ತಿಳಿಸಿದ್ದು, ಜಮ್ಮು ಕಾಶ್ಮೀರದಲ್ಲಿ ‘ಜನ ಸಾಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ತನ್ನ ಹೇಳಿಕೆಯನ್ನು ಪ್ರಸ್ತಾಪ ಮಾಡಿದ್ದಕ್ಕೆ ರಾಹುಲ್ ಗಾಂಧಿ ಪಾಕಿಸ್ತಾನದ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರದ ವಿಚಾರದಲ್ಲಿ ಯಾವುದೇ ರಾಷ್ಟ್ರ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಎರಡು ಟ್ವೀಟ್ ಮಾಡಿ ಸ್ಪಷ್ಟಪಡಿಸಿರುವ ಅವರು, ಹಲವು ವಿಚಾರಗಳಲ್ಲಿ ನಾನು ಪ್ರಸ್ತುತ ಸರ್ಕಾರವನ್ನು ಒಪ್ಪುವುದಿಲ್ಲ. ಆದರೆ, ಕಾಶ್ಮೀರದ ವಿಚಾರ ಭಾರತ ಆಂತರಿಕ ಸಮಸ್ಯೆಯಾಗಿದೆ. ಪಾಕಿಸ್ತಾನ ಹಾಗೂ ಇತರೆ ರಾಷ್ಟ್ರಗಳು ಮಧ್ಯಪ್ರವೇಶಿಸಲು ಯಾವುದೇ ಮಾರ್ಗಗಳಿಲ್ಲ ಎಂದು ಮೊದಲ ಟ್ವೀಟ್ ಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರವಿದೆ. ಇದಕ್ಕೆ ಕಾರಣ ಪಾಕಿಸ್ತಾನ ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು. ಇಡೀ ವಿಶ್ವದಲ್ಲೇ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪ್ರಮುಖ ರಾಷ್ಟ್ರ ಪಾಕಿಸ್ತಾನ ಎನ್ನುವುದು ಪ್ರಪಂಚಕ್ಕೇ ತಿಳಿದಿದೆ ಎಂದು ಎರಡನೇ ಟ್ವೀಟ್‍ನಲ್ಲಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‍ನ ಹಲವು ನಾಯಕರು 370ನೇ ವಿಧಿಯನ್ನು ರದ್ದುಪಡಿಸಿರುವುದು ಹಾಗೂ ಕಾಶ್ಮೀರದ ಕಣಿವೆಯಲ್ಲಿ ದಿಗ್ಭಂಧನ ಹಾಕಿರುವುದನ್ನು ವಿರೋಧಿಸಿದ್ದರು.

ಅಲ್ಲದೆ, ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ರಾಹುಲ್ ಗಾಂಧಿ ನಡುವೆ ಟ್ವೀಟ್ ವಾರ್ ನಡೆದಿತ್ತು. ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ಸ್ಥಿತಿಗತಿಯನ್ನು ಅರಿತು ನಂತರ ಮಾತನಾಡಿ ಎಂದಿದ್ದರು. ಇದೇ ಆಹ್ವಾನದ ಮೇರೆಗೆ ಕಳೆದ ವಾರ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳ ನಾಯಕರ ನಿಯೋಗವು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿತ್ತು. ಆಗ ಶ್ರೀನಗರದ ಒಳಗೆ ಅವರನ್ನು ಕಾಲಿಡಲು ಬಿಟ್ಟಿರಲಿಲ್ಲ. ಮರಳಿ ದೆಹಲಿಗೆ ಕಳುಹಿಸಲಾಗಿತ್ತು.

rahul gandhi

ಪ್ರವೇಶಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ, ಜನರಿಂದ ಏನನ್ನು ಮರೆಮಾಚಲು ಸರ್ಕಾರ ಯತ್ನಿಸುತ್ತಿದೆ. ಯಾಕೆ ಪ್ರತಿಪಕ್ಷಗಳನ್ನು ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಲಾಗಿದೆ ಎಂದು ಹಲವು ಪ್ರಶ್ನೆಗಳನ್ನು ಎತ್ತಿದ್ದರು.

ಇದೀಗ ಜಮ್ಮು ಕಾಶ್ಮೀರದ್ದು ಆಂತರಿಕ ಸಮಸ್ಯೆಯಾಗಿದೆ. ಅಲ್ಲದೆ, ಕಾಶ್ಮೀರದಲ್ಲಿ ಹಿಂಸಾಚಾರ ನಡೆಯಲು ಪಾಕಿಸ್ತಾನವೇ ಕಾರಣ, ಪಾಕಿಸ್ತಾನ ವಿಶ್ವದಾದ್ಯಂತ ಉಗ್ರರನ್ನು ಪಸರಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *