ಕೋಲಾರ: ಇಂದು ಕೋಲಾರ ಜಿಲ್ಲೆಗೆ ಬಂದಿದ್ದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿದ್ದಾರೆ.
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗೌನಿಪಲ್ಲಿ ನಡೆದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪವನ್, ಭಾಷಣ ವೇಳೆ ರಮೇಶ್ ಕುಮಾರ್ ಪವನ್ ಕಲ್ಯಾಣ್ ಗೆ ತಮ್ಮ ಬೆಂಬಲ ಸೂಚಿಸಿ ಅವರ ನಾಯಕತ್ವ ಬೆಳೆಯಬೇಕು, ಅವರಿಗೆ ನಿಮ್ಮೆಲ್ಲರ ಬೆಂಬಲ ನೀಡಿ ಎಂದು ಜನರಿಗೆ ಮನವಿ ಮಾಡಿಕೊಂಡ ಹಿನ್ನೆಲೆ ಪವನ್ ಕಲ್ಯಾಣ್ ಅವರು ರಮೇಶ್ ಕುಮಾರ್ ಕಾಲಿಗೆ ನಮಸ್ಕಾರ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡಬೇಕೆಂಬ ಹಂಬಲ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ನಾನು ರಾಜ್ಯದಲ್ಲಿ ಕನ್ನಡದಲ್ಲಿ ಮಾತನಾಡುವೆ ಎಂದು ಕನ್ನಡದಲ್ಲೇ ಹೇಳಿದರು. ವೇದಿಕೆಯಲ್ಲಿರುವ ಎಲ್ಲಾ ನಾಯಕರು ದೇಶದ ಚಿಂತನೆ ಮಾಡುವವರೆ. ಭವಿಷ್ಯದಲ್ಲಿ ದೇಶದ ಚಿಂತನೆ, ಉದ್ಧಾರ ಮಾಡುವ ನಾಯಕರು ನಮ್ಮಲ್ಲಿದ್ದಾರೆ. ಅಖಂಡ ಭಾರತದಲ್ಲಿ ಭಗತ್ ಸಿಂಗ್ ನಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ್ದಾರೆ ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ, ಹೈನೋದ್ಯಮವೆ ಮುಖ್ಯ ಕಸುಬು. ನೀರಿನ ಸಮಸ್ಯೆ ಹೆಚ್ಚಾಗಿದೆ ಆದರೂ ಇಲ್ಲಿ ನಾನಾ ಬೆಳೆಗಳನ್ನು ಬೆಳೆಯುತ್ತಾರೆ. ನಾನೂ ತೆಲುಗು ದೇಶದಲ್ಲಿ ಹುಟ್ಟಿದ್ರೂ ದೇಶದ ಚಿಂತನೆ ನನಗೆ ಮುಖ್ಯ. ದೇಶದ ಬೆನ್ನೆಲೆಬು ರೈತ. ಹಾಗಾಗಿ ದೇಶದ ರೈತರ ಸಮಸ್ಯೆಗಳು, ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳಿದ್ದರು ಅವರ ಹೋರಾಟಕ್ಕೂ ನಾನು ಬೆಂಬಲವಾಗಿ ನಿಲ್ಲುತ್ತೇನೆ. ರೈತರ ಸಮಸ್ಯೆಗಳ ಹೋರಾಟಕ್ಕೆ ನಾನು ಈ ರಾಜ್ಯಕ್ಕೆ ಬರುತ್ತೇನೆ. ರೈತರ ಉದ್ಧಾರಕ್ಕಾಗಿ ಸಹಕಾರ ಸಂಘಗಳ ಅವಶ್ಯಕತೆ ಇದೆ ಎಂದು ಪವನ್ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನಂಜಾವಧೂತ ಸ್ವಾಮಿಗಳು, ಪವನ್ ಕಲ್ಯಾಣ್ ಒಬ್ಬ ಜೂನಿಯರ್ ಭಗತ್ ಸಿಂಗ್ ಎಂದು ಹೊಗಳಿದರು. ಅವರು ಆಂಧ್ರದಿಂದ ಸಿಎಂ ಆಗಬೇಕು. ಅವರು ಸಿಎಂ ಆಗಲು ನೀವೆಲ್ಲಾ ಪವನ್ ಕಲ್ಯಾಣ್ ಗೆ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.