ನವದೆಹಲಿ/ಚೆನ್ನೈ: ಕರೂರು ಕಾಲ್ತುಳಿತ (Karur Stampede) ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ (Supreme Court) ನೇಮಿಸಿದ ಸಮಿತಿಯು ಅಗತ್ಯವಿದ್ದರೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ (Tamilnadu) ಕರೂರಿನಲ್ಲಿ ಟಿವಿಕೆ ನಾಯಕ (TVK Vijay) ವಿಜಯ್ ಅವರ ರ‍್ಯಾಲಿ ಸಂದರ್ಭದಲ್ಲಿ 41 ಜನರು ಸಾವನ್ನಪ್ಪಿದ್ದರು. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿತ್ತು. ಎಸ್‌ಐಟಿಯಲ್ಲಿ ತಮಿಳುನಾಡಿನ ಪೊಲೀಸರೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿ ವಿಚಾರಣೆ ಬಳಿಕ ಕರೂರು ಕಾಲ್ತುಳಿತ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೇ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್ ರಚಿಸಿತ್ತು.ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ
ಸದ್ಯ ಸುಪ್ರೀಂಕೋರ್ಟ್ ರಚಿಸಿದ ಸಮಿತಿಯು ಸಿಬಿಐ ನಿರ್ದೇಶಕರ ಬಳಿ ಕೆಲವು ದಾಖಲೆಗಳನ್ನು ಕೋರಿದ್ದು, ತನಿಖೆಯ ಭಾಗವಾಗಿ ಘಟನಾ ಸ್ಥಳಕ್ಕೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಭೇಟಿ ನೀಡಲಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ರಚಿಸಿರುವ ಈ ಸಮಿತಿಯಲ್ಲಿ ತಮಿಳುನಾಡು ಕೇಡರ್‌ನ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಸುಮಿತ್ ಸರನ್ ಮತ್ತು ಸೋನಲ್ ವಿ ಮಿಶ್ರಾ ಕೂಡ ಇದ್ದಾರೆ.
ಸೆಪ್ಟೆಂಬರ್ 27ರಂದು ನಟ, ಟಿವಿಕೆ ಮುಖ್ಯಸ್ಥ ವಿಜಯ್ ತಮಿಳುನಾಡಿನ ಕರೂರಿನಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು. ಈ ವೇಳೆ ವಿಜಯ್ ಅನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು. ಜೊತೆಗೆ ಆ ದಿನ ವಿಜಯ್ ಕರೂರಿಗೆ 7 ಗಂಟೆ ತಡವಾಗಿ ಆಗಮಿಸಿದ್ದರು. ಇದರಿಂದ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿತ್ತು. ಪರಿಣಾಮ 41 ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

