ಧಾರವಾಡ: ರಾಜ್ಯ ಸರ್ಕಾರ ಪ್ರಸ್ತುತ ಬಜೆಟ್‍ನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ, ಸರ್ಕಾರದ ಈ ಕ್ರಮವನ್ನು ವಿಶ್ವಕರ್ಮ ಸಮಾಜದ ವತಿಯಿಂದ ಖಂಡಿಸಲಾಗಿದ್ದು, ಸಿಎಂ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಈ ಕುರಿತು ಅಖಿಲ ಭಾರತೀಯ ವಿಶ್ವಕರ್ಮ ಛಾತ್ರಾ ಯುವ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಬಡಿಗೇರ್ ಮಾತನಾಡಿ, ಸರ್ಕಾರ ಹಾಗೂ ಮುಖ್ಯಮಂತ್ರಿ ಕ್ರಮವನ್ನು ಖಂಡಿಸಿದರು. ಅಲ್ಲದೇ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಶ್ವಕರ್ಮ ಪಂಚ ಕಸುಬುಗಳ ಕೆಲಸವನ್ನು ಮಾಡಿ ಪ್ರತಿಭಟಿಸುದಾಗಿ ಹೇಳಿದರು. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ
ನಮ್ಮ ಸಮಾಜಕ್ಕಾಗಿಯೇ ಅಭಿವೃದ್ಧಿ ನಿಗಮ ಮಾಡಿದ್ದಾರೆ. ಆದರೆ ಈ ನಿಗಮಕ್ಕೆ ಮೊದಲಿನಿಂದಲೂ ಸರಿಯಾದ ಅನುದಾನವನ್ನೇ ನೀಡಿಲ್ಲ. ಈಗಿನ ಸಿಎಂ ಅನುದಾನ ನೀಡುತ್ತಾರೆ ಎಂದು ಭರವಸೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಭರವಸೆ ಹುಸಿಯಾಗಿದ್ದು ಸದ್ಯ ಪೂರಕ ಬಜೆಟ್ ಮಾಡುತ್ತಾರೆ ಅಂತಾ ಹೇಳಲಾಗುತ್ತಿದ್ದು, ಪೂರಕ ಬಜೆಟ್‍ನಲ್ಲಿ ಆದರೂ ನಮ್ಮ ನಿಗಮಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ
ಈ ಸಂಬಂಧ ಸಿಎಂಗೂ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೂ ನಮಗೆ ಆಗಿರುವ ಅನ್ಯಾಯವನ್ನು ತಿಳಿಸುತ್ತೇವೆ. ಜೊತೆಗೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಆಯಾ ಜಿಲ್ಲೆಗಳಲ್ಲಿ ಸಮಾಜ ಬಾಂಧವರು ಒತ್ತಡ ಹಾಕಲಿದ್ದು, ಇಷ್ಟಾದ ಬಳಿಕವೂ ಅನುದಾನ ನೀಡದೇ ಹೋದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಶ್ವಕರ್ಮ ಪಂಚ ವೃತ್ತಿಗಳನ್ನೇ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸಮಾಜದ ಸಲಕರಣೆಗಳನ್ನು ಜಿಲ್ಲಾಧಿಕಾರಿ ಕಚೇರಿ ಎದುರು ತಂದಿಟ್ಟು, ಅಲ್ಲಿಯೇ ಕೆಲಸ ಮಾಡಿ ಸರ್ಕಾರಕ್ಕೆ ನಮ್ಮ ನೋವು ಹೇಳಿಕೊಳ್ಳುತ್ತೇವೆ ಎಂದು ಬಡಿಗೇರ್ ಹೇಳಿದರು.