Connect with us

ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

ಹೈದರಾಬಾದ್: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತ ಪಟ್ಟ ನಂತರ ಆಕೆಯ ಐದು ವರ್ಷದ ಮಗ ಅದನ್ನು ತಿಳಿಯದೆ ಆಕೆಯ ಪಕ್ಕದಲ್ಲೇ ಮಲಗಿದ್ದ ಹೃದಯವಿದ್ರಾವಕ ಘಟನೆ ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಸಮೀನಾ ಸುಲ್ತಾನ ಮೃತ ಪಟ್ಟ ಮಹಿಳೆ. ಸಮೀನಾ ಹಾಗೂ ಆಕೆಯ 5 ವರ್ಷದ ಮಗ ಹೈದರಬಾದ್‍ನ ಖಾರೆದಾನ್ ಕೈಗಾರಿಕಾ ಪ್ರದೇಶದ ನಿವಾಸಿಗಳು. ಸಮೀನಾ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆ ಮನೆಯವರ ಸಹಾಯದಿಂದ ಸೋಮವಾರ ಆಸ್ಪತ್ರೆಗೆ  ದಾಖಲಾಗಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡಿದ ನಂತರ ಚಿಕಿತ್ಸೆ ಫಲಿಸದೇ ಸಮೀನಾ ಮೃತ ಪಟ್ಟಿದ್ದಾರೆ.

ತನ್ನ ತಾಯಿ ಮೃತ ಪಟ್ಟಿರುವುದನ್ನು ತಿಳಿಯದ ಬಾಲಕ ಆಸ್ಪತ್ರೆಯ ಹಾಸಿಗೆ ಮೇಲೆ ಅಮ್ಮನ ಪಕ್ಕದಲ್ಲೇ ಮಲಗಿ 5 ಗಂಟೆಗಳ ಕಾಲ ನಿದ್ರೆಗೆ ಜಾರಿದ್ದಾನೆ. ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ನಂತರ ಬಾಲಕನನ್ನು ತಾಯಿಂದ ಬೇರ್ಪಡಿಸಿ ಬೇರೆ ಕೊಠಡಿಗೆ ಕಳುಹಿಸಿದ್ದಾರೆ.

ಸಮೀನಾ ಸುಲ್ತಾನ ಅವರ ಹೆಚ್ಚಿನ ಮಾಹಿತಿ ತಿಳಿಯದ ಆಸ್ಪತ್ರೆಯ ಸಿಬ್ಬಂದಿ ಹೈದರಾಬಾದ್ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಎನ್‍ಜಿಓ ಸಹಾಯ ಪಡೆದಿದ್ದಾರೆ. ಎನ್‍ಜಿಓ ಸಮೀನಾ ಅವರ ಆಧಾರ್ ಸಂಖ್ಯೆಯ ನೆರವಿನಿಂದ ಅವರ ಸಂಬಂಧಿಕರನ್ನು ಪತ್ತೆ ಹಚ್ಚಿದ್ದಾರೆ. ಮಾಹಿತಿ ಪಡೆದು ಆಸ್ಪತ್ರೆಗೆ ಬಂದ ಸಮೀನಾ ಅವರ ಸಂಬಂಧಿ ಬಾಲಕನ ಜವಾಬ್ದಾರಿ ಪಡೆದಿದ್ದಾರೆ. ಘಟನೆ ಕುರಿತು ಎನ್‍ಜಿಓ ಸಂಸ್ಥೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

Advertisement
Advertisement