ಉಡುಪಿ: ಭಗವಾನ್ ಶ್ರೀಕೃಷ್ಣ ಹುಟ್ಟಿದ ದಿನವೇ ಹುಟ್ಟಿದ.ಸ ಶ್ರೀಕೃಷ್ಣ ಭೂಮಿಗೆ ಬಂದ ಘಳಿಗೆ, ನಕ್ಷತ್ರ ತಿಥಿಯಲ್ಲೇ ಆತನ ಜನ್ಮವೂ ಆಗಿದೆ. ಕೃಷ್ಣ ಹುಟ್ಟಿದ್ದು ಆತನ ಭಕ್ತರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ಗೋಶಾಲೆಯಲ್ಲಿದ್ದ ಗೋಪಾಲಕರಿಗೂ ಆಗಿದೆ.
ದೇವರು ಹುಟ್ಟಿದ ದಿನದಂದೇ ಹುಟ್ಟಿದ ಆತನಿಗೆ ಇದೀಗ ದೇವರ ಹೆಸರನ್ನೇ ಇಡಲಾಗಿದೆ. ಉಡುಪಿ ಕೃಷ್ಣ ಮಠದ ಗರ್ಭಗುಡಿಯಲ್ಲಿ ಅಷ್ಟಮಿಯ ರಾತ್ರಿ 11.55 ಕ್ಕೆ ದೇವರಿಗೆ ಅಘ್ರ್ಯ ಪ್ರದಾನ ನಡೆಯುತ್ತಿತ್ತು. ಪರ್ಯಾಯ ಪಲಿಮಾರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಇತ್ತ ಗೋಶಾಲೆಯಲ್ಲಿ ಹಸುವೊಂದು ಗಂಡು ಕರುವಿಗೆ ಜನ್ಮ ನೀಡಿದೆ.
ಭಗವಾನ್ ಕೃಷ್ಣನ ಜನ್ಮದಿಂದ ಮಠದೊಳಗೆ ಭಕ್ತರಿಗೆ ಎಷ್ಟು ಖುಷಿಯಾಗಿತ್ತೋ ಅಷ್ಟೇ ಸಂತಸ ಗೋಪಾಲಕರಿಗೆ ಗೋಶಾಲೆಯೊಳಗೆ ಆಗಿದೆ. ಅಷ್ಟಮಿಯಂದು ಹುಟ್ಟಿದ ಗಂಡು ಕರುವಿಗೆ ಇದೀಗ ಕೃಷ್ಣ ಎಂದೇ ಹೆಸರಿಡಲಾಗಿದೆ. ಕರುವಿನ ತಾಯಿಯ ಹೆಸರು ಬದಲಾಯಿಸಿ ದೇವಕಿ ಎಂದು ಪುನರ್ ನಾಮಕರಣ ಮಾಡಲಾಗಿದೆ.
ಕರುವಿಗೆ ಹೂವಿನ ಮಾಲೆ ಹಾಕಿ ಮಠದ ಗೋಶಾಲೆಗೆ ಸ್ವಾಗತ ಮಾಡಲಾಗಿದೆ. ಅಷ್ಟಮಿಯಂದೆ ಕರುವಿಗೆ ಜನ್ಮ ನೀಡಿದ ತಾಯಿ ಹಸುವಿಗೆ ದೋಸೆ, ಬೆಲ್ಲದ ಪಾನಕ, ಬಾಳೆಹಣ್ಣು, ಸಿಹಿ ಅವಲಕ್ಕಿ ನೀಡಲಾಗಿದೆ. ಕೃಷ್ಣನ ಅಮ್ಮನಿಗೂ ಹೂಮಾಲೆ ಹಾಕಿ ಪೂಜಿಸಲಾಗಿದ್ದು, ಉಡುಪಿ ಕೃಷ್ಣಮಠಕ್ಕೆ ಬರುವ ಭಕ್ತರು ಕಡೆಗೋಲು ಕೃಷ್ಣನನ್ನು ನೋಡುವ ಜೊತೆಗೆ ಜೂನಿಯರ್ ಕರು ಕೃಷ್ಣನನ್ನೂ ನೋಡಿ, ಮುಟ್ಟಿ ಮುದ್ದು ಮಾಡಿ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv