ಬೆಂಗಳೂರು: ಅಧಿಕಾರಕ್ಕೆ ಏರಿದ ಬಳಿಕ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ನಲಿ 5 ಗ್ಯಾರಂಟಿ ಯೋಜನೆಗೆ (Guarantee Scheme) ತಾತ್ವಿಕ ಒಪ್ಪಿಗೆ ಸಿಕ್ಕಿದ್ದು ಮುಂದಿನ ಕ್ಯಾಬಿನೆಟ್ (Cabinet) ಬಳಿಕ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ (Siddaramaiah) ಎಲ್ಲಾ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತ ನೀಡುತ್ತೇವೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಲಕ್ಷುರಿ ಹೊರತು ಪಡಿಸಿ ಸರ್ಕಾರಿ ಬಸ್ಸಿನಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಎರಡು ವರ್ಷದವರೆಗೆ ತಿಂಗಳಿಗೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ.ಭತ್ಯೆ ನೀಡುತ್ತೇವೆ . ಮಧ್ಯೆ ಕೆಲಸ ಸಿಕ್ಕಿದರೆ ಭತ್ಯೆ ನೀಡುವುದಿಲ್ಲ ಎಂದು ಘೋಷಿಸಿದರು.
Advertisement
Advertisement
ಮುಂದಿನ ಕ್ಯಾಬಿನೆಟ್ ಯಾವಾಗ ನಡೆಯಲಿದೆ ಎಂದು ಕೇಳಿದ್ದಕ್ಕೆ, ಮುಂದಿನ ವಾರವೇ ನಡೆಯಲಿದೆ. ಎಲ್ಲಾ ಸಚಿವಾಲಯದ ಜೊತೆ ಚರ್ಚೆ ನಡೆಸಿ ಆದೇಶ ಜಾರಿ ಮಾಡಲಾಗುವುದು. ಈ ಲೆಕ್ಕಾಚಾರದ ವಿವರಗಳನ್ನು ಮುಂದೆ ನೀಡಲಾಗುವುದು. ಜುಲೈನಲ್ಲಿ ಮತ್ತೆ ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಕುರಿ ಲೆಕ್ಕ ಹಾಕಲು ಬಾರದವನಿಗೆ ಹಣಕಾಸು ಖಾತೆ ಯಾಕೆ ಎಂದಿದ್ದವರಿಗೆ 13 ಬಜೆಟ್ ಮಂಡಿಸಿ ಠಕ್ಕರ್ ಕೊಟ್ಟ ‘ಟಗರು’!
Advertisement
Advertisement
ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ 56 ಸಾವಿರ ಕೋಟಿ ರೂ. ಆಗಬಹುದು. ಸರ್ಕಾರದ ಬಜೆಟ್ 3.10 ಲಕ್ಷ ಕೋಟಿ ರೂ. ಇದೆ. 15 ಹಣಕಾಸು ಆಯೋಗದ ವರದಿ ಪ್ರಕಾರ ಕೇಂದ್ರದಿಂದ 50 ಸಾವಿರ ಕೋಟಿ ರೂ. ಅನುದಾನ ಬರುವ ಸಾಧ್ಯತೆಯಿದೆ. ಆದರೆ ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ. ಬರಬೇಕಿತ್ತು. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಹೋಗುತ್ತದೆ. ಕೇಂದ್ರದಿಂದ ನಮಗೆ ನಿರೀಕ್ಷಿತ ಪ್ರಮಾಣದಿಂದ ಅನುದಾನ ಬರುತ್ತಿರಲಿಲ್ಲ. ಇಲ್ಲಿದ್ದ ಬಿಜೆಪಿ ಸರ್ಕಾರ ಕೇಳಲಿಲ್ಲ. 25 ಬಿಜೆಪಿ ಸಂಸದರು ಈ ಕರ್ನಾಟಕ ಹಣವನ್ನು ಕೇಳಲಿಲ್ಲ ಎಂದು ಕಿಡಿಕಾರಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ 53 ಲಕ್ಷದ 11 ಸಾವಿರ ಕೋಟಿ ರೂ. ಸಾಲ ಇತ್ತು. ಈಗ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ನಾನು ಇದ್ದಾಗ ರಾಜ್ಯದ ಸಾಲ 2 ಲಕ್ಷದ 44 ಸಾವಿರ ಕೋಟಿ ರೂ. ಸಾಲ ಇತ್ತು. ಈಗ ಇದು 5 ಲಕ್ಷ 54 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. 2023ರಲ್ಲಿ 56 ಸಾವಿರ ರೂ. ಕೋಟಿ ರೂ. ಅಸಲು ಮತ್ತು ಬಡ್ಡಿ ಕಟ್ಟಲು ಹೋಗುತ್ತದೆ ಎಂದು ವಿವರಿಸಿದರು. ಎಲ್ಲವನ್ನೂ ಲೆಕ್ಕ ಹಾಕಿ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.