ನವದೆಹಲಿ: ಮೂವರು ಗೆಳೆಯರು ಸೇರಿ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಭಾನುವಾರ ನಡೆದಿದೆ.
ಮೃತ ದುರ್ದೈವಿಯನ್ನು ಗೋವಿಂದ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ಆದರ್ಶನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸತೀಶ್(23), ಸಂದೀಪ್(30) ಹಾಗೂ ಸಾಗರ್(30) ಎಂಬ ಮೂವರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಶನಿವಾರ ಮಧ್ಯಾಹ್ನದ ಬಳಿಕ ಇಬ್ಬರು ಜ್ಯೂಸ್ ಕುಡಿಯಲೆಂದು ಇಲ್ಲಿನ ಸಂತೋಷ್ ಎಂಬವರ ಸ್ಟಾಲ್ ಗೆ ಬಂದಿದ್ದರು. ಜ್ಯೂಸ್ ಕುಡಿದ ನಂತರ ಸಂತೋಷ್ ಬಿಲ್ ಪಾವತಿ ಮಾಡುವಂತೆ ತಿಳಿಸಿದ್ರು. ಈ ವೇಳೆ ಜ್ಯೂಸ್ ಕುಡಿದ ಇಬ್ಬರು ಹಣ ಕೊಡಲು ನಿರಾಕರಿಸಿ ಸಂತೋಷ್ ರನ್ನು ನಿಂದಿಸಿದ್ದಲ್ಲದೆ ಜಗಳವಾಡಿದ್ದರು. ಅಲ್ಲದೇ ಅದೇ ದಿನ ಸಂಜೆ ಸಂತೋಷ್‍ಗೆ ಪಾಠ ಕಲಿಸಬೇಕೆಂದು ಸಾಗರ್ ಎಂಬ ಮತ್ತೊಬ್ಬ ಗೆಳೆಯನನ್ನು ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಂತೋಷ್ ಗೆಳೆಯರಾದ ಮಹೇಶ್ ಹಾಗೂ ಸುಮಿತ್ ಎಂಬವರು ಸ್ಥಳದಲ್ಲಿದ್ದರು. ಅವರು ಕೂಡ ಸಹಾಯಕ್ಕೆಂದು ನಾಗರಿಕ ರಕ್ಷಣಾ ಸಿಬ್ಬಂದಿಯಾಗಿದ್ದ ಗೋವಿಂದ್ ಅವರನ್ನ ಘಟನಾ ಸ್ಥಳಕ್ಕೆ ಕರೆದಿದ್ದರು. ಈ ಸಂದರ್ಭದಲ್ಲಿ ಗಲಾಟೆ ತಾರಕಕ್ಕೇರಿ ಮೂವರು ಆರೋಪಿಗಳು ಮಹೇಶ್ ಹಾಗೂ ಗೋವಿಂದ್‍ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ್ ಅವರನ್ನು ಬಡಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಗೋವಿಂದ್ ಮೃತಪಟ್ಟಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲಿಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದರು. ಗೋವಿಂದ್ ಅವರ ಎದೆಗೆ ಸಾಕಷ್ಟು ಬಾರಿ ಚಾಕುವಿನಿಂದ ಇರಿದ ಪರಿಣಾಮ ಗಂಭೀರ ಗಾಯವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ.