ಮುಂಬೈ: ಟಾಟಾ ಸನ್ಸ್‌ನ (Tata Sons) ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Cyrus Mistry) ಸಂಚರಿಸುತ್ತಿದ್ದ ಕಾರು ಅಪಘಾತವಾಗಿ ಸಾವನ್ನಪ್ಪಿದ ಎರಡು ತಿಂಗಳ ನಂತರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಶನಿವಾರ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಾಂಡೋಲೆ (Dr Anahita Pandole) ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2022ರ ಸೆಪ್ಟೆಂಬರ್ 4 ರಂದು ಗುಜರಾತ್‍ನಿಂದ ಮುಂಬೈಗೆ ತೆರಳುತ್ತಿದ್ದಾಗ ಪಾಲ್ಘರ್‌ನ ಚರೋತಿಯ ಸೂರ್ಯ ನದಿ ಸೇತುವೆ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸೈರಸ್ ಮಿಸ್ತ್ರಿ ಸಂಚರಿಸುತ್ತಿದ್ದ ಮರ್ಸಿಡಿಸ್ (Mercedes-Benz) ಕಾರು ಅಪಘಾತವಾಗಿತ್ತು. ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸೇರಿ ಇಬ್ಬರು ಮೃತಪಟ್ಟಿದ್ದರು. ಕಾರಿನಲ್ಲಿದ್ದ ಮತ್ತಿಬ್ಬರು ಅನಾಹಿತಾ ಪಾಂಡೋಲೆ (55) ಹಾಗೂ ಅವರ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದರು. ಇದನ್ನೂ ಓದಿ: ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ – ಸಚಿವ ಕಿರಣ್ ರಿಜಿಜು
ಇದೀಗ ಪೊಲೀಸರು ಕಾರು ಚಲಾಯಿಸುತ್ತಿದ್ದ ಅನಾಹಿತಾ ಪಾಂಡೋಲೆ ವಿರುದ್ಧ ಮೋಟಾರು ವಾಹನ ಕಾಯಿದೆ ಭಾರತೀಯ ದಂಡ ಸಂಹಿತೆ 304(ಎ) (ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣ), 279 (ಅತಿವೇಗದ ಚಾಲನೆ), 337 (ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಮುಂಬೈನ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಪತಿ ಡೇರಿಯಸ್ ಪಾಂಡೋಲೆ ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಮುಂಬೈನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದೀಗ ಪೊಲೀಸರು ಅನಾಹಿತಾ ಪಾಂಡೋಲೆ ಮತ್ತು ಡೇರಿಯಸ್ ಪಾಂಡೋಲೆ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೈರಸ್ ಮಿಸ್ತ್ರಿ ಕಾರು ಅಪಘಾತಕ್ಕೂ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ: ಮರ್ಸಿಡಿಸ್ ಕಂಪನಿ