ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

Public TV
3 Min Read
Sourav Ganguly

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ಗಂಗೂಲಿಯ ಒಂದು ಟ್ವೀಟ್. ಆ ಬಳಿಕ ಇದೀಗ ಗಂಗೂಲಿ ರಾಜಕೀಯಕ್ಕೆ ಎಂಟ್ರಿಕೊಡುವುದು ಖಚಿತ ಎಂಬ ಮಾತು ಎಲ್ಲಡೆ ಕೇಳಿ ಬರುತ್ತಿದೆ.

Sourav Ganguly 1

ಹೌದು ಕ್ರಿಕೆಟ್‍ನಲ್ಲಿ ಭಾರತ ತಂಡದ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ ಗಂಗೂಲಿ, 2019ರಲ್ಲಿ ತಮಗೆ ಒಲಿದು ಬಂದ ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಕೂಡ ಉತ್ತಮವಾಗಿ ನಿಭಾಯಿಸಿ ಹಲವು ಬದಲಾವಣೆಗಳೊಂದಿಗೆ ಯಶಸ್ಸಿನ ಮೇಟ್ಟಿಲೇರಿಸಿದ್ದಾರೆ. ಈ ನಡುವೆ ಇಂದು ದಿಢೀರ್ ಆಗಿ ಒಂದು ಟ್ವೀಟ್ ಮಾಡಿದ ಗಂಗೂಲಿ, 1992ರಲ್ಲಿ ನನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭಗೊಂಡು ಇದೀಗ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ಬೆಂಬಲ ನನಗೆ ಸಿಕ್ಕಿದೆ. ನನ್ನ ಕ್ರಿಕೆಟ್ ವೃತ್ತಿ ಬದುಕಿಗೆ ಸಹಕರಿಸಿದ, ನಾನು ಈ ಸ್ಥಾನಕ್ಕೆ ಬರಲು ಬೆಂಬಲ ನೀಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಇಂದು ಇನ್ನೊಂದು ಹೊಸ ಪ್ರಾರಂಭದ ಹೆಜ್ಜೆಯನ್ನಿಟ್ಟಿದ್ದು ಇದು ಹಲವರಿಗೆ ನೆರವಾಗಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನ ಹೊಸ ಪ್ರಯತ್ನಕ್ಕೆ ನಿಮ್ಮಲ್ಲರ ಬೆಂಬಲ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

SOURAVGANGULY AMITH SHA

ಪೋಸ್ಟ್ ನೋಡಿದ ಪ್ರತಿಯೊಬ್ಬರು ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗುಡ್‍ಬೈ ಹೇಳಿ ಆರಂಭಿಸುವ ಹೊಸ ಅಧ್ಯಾಯ ಯಾವುದು ಎಂಬ ಕುತೂಹಲದಲ್ಲಿದ್ದಾರೆ. ಆದರೆ ಗಂಗೂಲಿ ರಾಜೀನಾಮೆ ಕೊಟ್ಟಿಲ್ಲ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಯ್ ಶಾ, ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

Sourav Ganguly 2

ಈ ನಡುವೆ ಗಂಗೂಲಿ ಟ್ವೀಟ್ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು, ಗಂಗೂಲಿ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. 2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಪರವಾಗಿ ಚುನಾವಣೆಯ ಅಖಾಡಕ್ಕೆ ಧುಮುಕಲಿದ್ದಾರೆ. ದಾದಾ ಬಿಜೆಪಿ ಸೇರಿ ದೀದಿಗೆ ಟಕ್ಕರ್ ನೀಡಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿತ್ತು. 2021ರ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆ ಬಳಿಕ ಗಂಗೂಲಿಗೆ ಲಘು ಹೃದಯಾಘಾತವಾಯಿತು. ನಂತರ ರಾಜಕೀಯ ಪ್ರವೇಶಿಸುವ ಗಾಳಿಸುದ್ದಿಗೆ ಬ್ರೇಕ್ ಬಿದ್ದಿತ್ತು. ಆ ಬಳಿಕ ಕೆಲ ತಿಂಗಳ ಹಿಂದೆ ಗಂಗೂಲಿ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದರು. ಶಾ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಆದಾದ ಬಳಿಕ ಇದೀಗ ದಾದಾ ಮಾಡಿರುವ ಟ್ವೀಟ್ ರಾಜಕೀಯ ಎಂಟ್ರಿಗೆ ಪುಷ್ಠಿ ಕೊಡುತ್ತಿದೆ. ದಾದಾರ ಹೊಸ ಹೆಜ್ಜೆ ರಾಜಕೀಯ ಪ್ರವೇಶ ಎಂಬ ಮಾತು ಆರಂಭವಾಗಿದೆ. ರಾಜಕೀಯ ರಂಗದಲ್ಲಿ ಹೊಸ ಇನ್ಸಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಬಿಜೆಪಿಯಿಂದ ರಾಜ್ಯಸಭೆಗೆ ಸೌರವ್ ಗಂಗೂಲಿ ಹೋಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

ಈ ನಡುವೆ ಗಂಗೂಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ವರದಿಯಾಗಿದೆ. ಭಾರತದಾದ್ಯಂತ ಗಂಗೂಲಿ ಕ್ರಿಕೆಟ್ ಆಕಾಡೆಮಿ ಆರಂಭಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಆಕಾಡೆಮಿ ಆರಂಭಿಸುವ ಮೂಲಕ ಗಂಗೂಲಿ ಕ್ರಿಕೆಟ್‍ಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಹೊರಟಿದ್ದಾರೆ ಇದೇ ಅವರ ಹೊಸ ಹೆಜ್ಜೆ ಎಂಬುದಾಗಿ ಗುಸುಗುಸು ಇದೆ.

ದಾದಾ ಮಾಡಿರುವ ಆ ಒಂದು ಟ್ವೀಟ್ ದಾದಾ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇದಕ್ಕೆಲ್ಲ ಗಂಗೂಲಿಯೇ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಕೊಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *