ದೆಹಲಿ ಪೊಲೀಸರ ಭರ್ಜರಿ ಬೇಟೆ – 2,000 ಕೋಟಿ ಮೌಲ್ಯದ ಕೊಕೇನ್ ವಶ

Public TV
1 Min Read
In Biggest Drug Bust In Delhi 500 kg Cocaine Worth RS 2000 Crore Seized

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 2,000 ಕೋಟಿ ರೂ. ಮೌಲ್ಯದ 500 ಕೆಜಿ ಕೊಕೇನ್‍ನ್ನು (Cocaine) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ತಂಡ ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಭಾನುವಾರ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡು ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು. ಇದಾದ ನಂತರ ಮಾದಕ ವಸ್ತುಗಳ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ಬೃಹತ್ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ.

ಭಾನುವಾರ ಬಂಧಿಸಲಾಗಿದ್ದ ಆರೋಪಿಗಳನ್ನು ಹಾಶಿಮಿ ಮೊಹಮ್ಮದ್ ವಾರಿಸ್ ಮತ್ತು ಅಬ್ದುಲ್ ನಯೀಬ್ ಎಂದು ಗುರುತಿಸಲಾಗಿದೆ.

ವಾರಿಸ್ ಜನವರಿ 2020 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಆತನ ಕುಟುಂಬ ಅಫ್ಘಾನಿಸ್ತಾನದಲ್ಲಿದೆ. ಭಾರತಕ್ಕೆ ಬಂದ ನಂತರ ವಿಕಾಸಪುರಿಯಲ್ಲಿ ಮೆಡಿಕಲ್ ಸ್ಟೋರ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ನಯೀಬ್ ಕೂಡ ಆಫ್ಘಾನ್ ಪ್ರಜೆಯಾಗಿದ್ದು, ಅವನು ತನ್ನ ತಂದೆಯೊಂದಿಗೆ ಜನವರಿ 2020 ರಿಂದ ಭಾರತದಲ್ಲಿ ವಾಸವಾಗಿದ್ದಾನೆ. ಆತನ ಇಡೀ ಕುಟುಂಬವು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದೆ.

ನಯೀಬ್ ಮತ್ತು ವಾರಿಸ್ ವಿಕಾಸಪುರಿಯ ಮೆಡಿಕಲ್ ಸ್ಟೋರ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಐಷರಾಮಿ ಜೀವನಶೈಲಿಗಾಗಿ ವಾರಿಸ್ ನಯೀಬ್ ನನ್ನು ಡ್ರಗ್ ವ್ಯವಹಾರಕ್ಕೆ ಆಮಿಷವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಅದೇ ದಿನ ಕಸ್ಟಮ್ಸ್ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ 24 ಕೋಟಿ ರೂ. ಮೌಲ್ಯದ 1,660 ಗ್ರಾಂ ಕೊಕೇನ್‍ನ್ನು ವಶಪಡಿಸಿಕೊಂಡಿದ್ದರು.

ದುಬೈನಿಂದ ದೆಹಲಿಗೆ ಆಗಮಿಸಿದ್ದ ಫೆಡರಲ್ ರಿಪಬ್ಲಿಕ್ ಆಫ್ ಲೈಬೀರಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

Share This Article