ಬೆಂಗಳೂರು: ಈ ಏರಿಯಾದಲ್ಲಿ ಅಂಗಡಿ ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡಂಗಿಲ್ಲ. ವ್ಯಾಪಾರ ಮಾಡಿದ್ದ ದುಡ್ಡನ್ನು ತಿಜೋರಿಯಲ್ಲಿ ಇಟ್ಟು ಹೋದರೆ ಬೆಳಗ್ಗೆ ಬಂದು ನೋಡಿದರೆ ಇರುತ್ತೋ ಇಲ್ಲವೋ ಎನ್ನುವ ಚಿಂತೆ. ಅದು ಚೆನ್ನಾಗಿ ನಿದ್ದೆಯಲ್ಲಿರುವ ಸಮಯ. ಈ ಸಮಯವೇ ಖದೀಮರಿಗೆ ಅಮೃತ ಘಳಿಗೆ
ಹೌದು. ಕಳೆದ ಎರಡು ತಿಂಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದರ ಮೇಲೆ ಒಂದು ಅಂಗಡಿ ಮಳಿಗೆಗಳಲ್ಲಿ ಕಳ್ಳತನ ಪ್ರಕರಣಗಳು ನಡೀತಾನೆ ಇದೆ. ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಮೊನ್ನೆಯೂ ಇದೇ ರೀತಿ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಅಂಗಡಿ ಮಳಿಗೆಯ ಮೇಲಿನ ಮನೆಯವರು ಕೂಗಿಕೊಂಡಾಗ ಓಡಿ ಹೋಗಿದ್ದಾರೆ. ಈ ರೀತಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.
Advertisement
ಅಮ್ಮಾಸ್ ಪೇಸ್ಟ್ರಿ ಬೇಕರಿಯಲ್ಲಿ ಒಳಗೆ ಮಲಗಿದ್ದಾರೆ ಅನ್ನೋದನ್ನು ಅರಿಯದ ಮೂವರು ಮಾಸ್ಕ್ ಧರಿಸಿದ್ದ ಖದೀಮರು ಮೆಲ್ಲಗೆ ಶಟರ್ ಎತ್ತಿದ್ದಾರೆ. ಒಳಗೆ ಸಿಬ್ಬಂದಿ ಇರೋದನ್ನು ನೋಡಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ.
Advertisement
Advertisement
10 ರೂ. ಸಿಕ್ತು: ರಾಜಾಜಿನಗರದ ಶ್ರೀ ಗಜಾನನ ಫ್ರೂಟ್ ಜ್ಯೂಸ್ ಸೆಂಟರ್ ನಲ್ಲಿ ಒಬ್ಬನೇ ಖದೀಮ, ಶಟರ್ ಮುರಿಯೋಕೆ ಸಾಧನ ರೆಡಿ ಮಾಡಿಕೊಂಡು ಬೀಗ ಹಾಗೂ ಶಟರ್ ಮುರಿದು ಒಳ ಹೋಗುತ್ತಾನೆ. ಆದರೆ ಅಲ್ಲಿದ್ದದ್ದು 10 ರೂಪಾಯಿ ಮಾತ್ರ. ನಂತರ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ ಹೋಗಿದ್ದಾನೆ.
Advertisement
ಇದೇ ಏರಿಯಾದ ಜೈ ಮಾರುತಿ ಸ್ಟೇಷನರಿಯಲ್ಲಿ ಮೊನ್ನೆಯಷ್ಟೇ ಇದೇ ಖದೀಮ ಬೀಗ ಮುರಿತಾನೆ. ಬೀಗ ಮುರಿಯೋ ಶಬ್ಧ ಮೇಲಿನ ಮನೆಯವರಿಗೆ ಕೇಳಿಸಿದೆ. ಹೊರಗೆ ಬಂದು ಕೂಗಿದಾಗ, ಕಳ್ಳ ಎಸ್ಕೇಪ್ ಆಗಿದ್ದಾನೆ.
ತಿಂಗಳ ಹಿಂದೆ ರಾಜಾಜಿನಗರದ ಮಾತೃಶ್ರೀ ಮೆಡಿಕಲ್ಸ್ ಶಟರ್ ಮುರಿದು 35 ಸಾವಿರ ದುಡ್ಡು ಎತ್ಕೊಂಡು ಪರಾರಿಯಾಗಿದ್ದಾರೆ ಖದೀಮರು. ಪದೇ ಪದೇ ಈ ಘಟನೆಗಳು ನಡೆಯುತ್ತಿರೋದರಿಂದ ವ್ಯಾಪಾರಿಗಳು ಬೆದರಿದ್ದಾರೆ. ಪೊಲೀಸರು ಹೆಚ್ಚು ಬೀಟ್ ಮಾಡಬೇಕು ಇಂತಹ ಖದೀಮರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇಷ್ಟೆಲ್ಲಾ ಘಟನೆಗಳು ಆಗಿರೋದು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ. ಸಿಸಿಟಿವಿಯಲ್ಲಿ ಎರಡು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮುಖ ಚಹರೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೂ ಪೊಲೀಸರು ಕಳ್ಳನನ್ನು ಹಿಡಿಯೋ ಕೆಲಸ ಮಾಡುತ್ತಿಲ್ಲ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.