ಲಕ್ನೋ: ನೊಯ್ಡಾದಲ್ಲಿ ಇತ್ತೀಚೆಗೆ ವರದಕ್ಷಿಣೆ ಕಿರುಕುಳ ನೀಡಿ ಬೆಂಕಿ ಹಚ್ಚಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ (Uttar Pradesh) ಮತ್ತೊಂದು ಭಯಾನಕ ವರದಕ್ಷಿಣೆ ಕ್ರೌರ್ಯದ (Dowry case) ವರದಿಯಾಗಿದೆ. ಅಮ್ರೋಹಾ ಜಿಲ್ಲೆಯ ಕಲಖೇಡ ಎಂಬಲ್ಲಿ ಅತ್ತೆ ಹಾಗೂ ಮಾವ ಸೇರಿ 23 ವರ್ಷದ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಆಸಿಡ್ ಕುಡಿಸಿ ಹತ್ಯೆ ಮಾಡಿದ್ದಾರೆ.
ಗುಲ್ಫಿಜಾ ಹತ್ಯೆಯಾದ ಮಹಿಳೆಯಾಗಿದ್ದಾಳೆ. ಆಕೆ ಒಂದು ವರ್ಷದ ಹಿಂದೆ ದಿದೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲಖೇಡ ಗ್ರಾಮದ ಪರ್ವೇಜ್ ಎಂಬವನನ್ನು ಮದುವೆ ಆಗಿದ್ದಳು. ಆಕೆಯ ಅತ್ತೆ-ಮಾವ 10 ಲಕ್ಷ ರೂ. ನಗದು ಮತ್ತು ಕಾರನ್ನು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬೆಂಕಿ ಹಚ್ಚಿ ಕೊಂದವನ ಕಾಲಿಗೆ ಗುಂಡೇಟು – ನನಗ್ಯಾವ ಪಶ್ಚಾತ್ತಾಪ ಇಲ್ಲ ಎಂದ ಪಾಪಿ!
ಆ.11 ರಂದು ಗಲ್ಫಿಜಾಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ. ಆಕೆಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 17 ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ತಂದೆ ಫರ್ಕಾನ್ ನೀಡಿದ ದೂರಿನ ಮೇರೆಗೆ, ಪರ್ವೇಜ್, ಅಸಿಮ್, ಗುಲಿಸ್ತಾ, ಮೋನಿಶ್, ಸೈಫ್, ಡಾ. ಭೂರಾ ಮತ್ತು ಬಬ್ಬು ಎಂಬ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ, ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ವರದಕ್ಷಿಣೆ ಸಾವಿನ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದೆ. ಆ ಪ್ರಕರಣದಲ್ಲಿ ಸಿರ್ಸಾ ಗ್ರಾಮದ ನಿಕ್ಕಿ ಎಂಬ 26 ವರ್ಷದ ಮಹಿಳೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು. ಹಲ್ಲೆ ಹಾಗೂ ಬೆಂಕಿ ಹೊತ್ತಿ ಉರಿದಿದ್ದ ಮಹಿಳೆಯ ವಿಡಿಯೋ ಸಹ ವೈರಲ್ ಆಗಿತ್ತು. ಈ ಸಂಬಂಧ ಮಹಿಳೆಯ ಪತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನೋಯ್ಡಾ ವರದಕ್ಷಿಣೆ ಹತ್ಯೆ ಕೇಸ್ | ಪ್ರಿಯತಮೆ ಜೊತೆಗಿದ್ದಾಗಲೇ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಪತ್ನಿ