ಬೆಂಗಳೂರು: ಒಂದು ಸಮಯದಲ್ಲಿ ಬೆಂಗಳೂರು ಯಾವತ್ತೂ ಕೂಲ್ ಕೂಲ್ ಆಗಿರುತ್ತಿತ್ತು. ಯಾವುದೇ ಸೀಸನ್ ಇರಲಿ ಬೆಂಗಳೂರು ವೆದರ್ ಮಾತ್ರ ತಂಪು ತಂಪಾಗಿರುತ್ತಿತ್ತು. ಆದರೆ ಈ ಬಾರಿ ಸಿಲಿಕಾನ್ ಸಿಟಿಯ ವಾತಾವರಣವೇ ಬದಲಾದಂತಿದೆ. ಈ ಬಾರಿಯ ಬೇಸಿಗೆಯಲ್ಲಿಯಂತೂ ಬೆಂಗಳೂರಿನಲ್ಲಿ ಇದ್ದೇವಾ ಅಥವಾ ಬೇರೆ ಜಿಲ್ಲೆಯಲ್ಲಿ ಇದ್ದೇವಾ ಅನ್ನೋ ಫೀಲ್ ಬಂದಿದೆ. ಅದರಲ್ಲೂ ಏಪ್ರಿಲ್ ತಿಂಗಳು ಅಂತೂ ಬೆಂಗಳೂರು ಕಾದ ಕಾವಲಿಯಂತಾಗಿತ್ತು.
ಹೌದು. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದ ವೀಕ್ಷಣಾಲಯವು ಏಪ್ರಿಲ್‌ನಲ್ಲಿ ಯಾವುದೇ ಮಳೆಯನ್ನು ದಾಖಲಿಸಿಲ್ಲ. ಇದು 1983 ರಿಂದ ಮೊದಲ ಬಾರಿಗೆ ದಾಖಲಾಗಿದೆ. ಹಾಗಿದ್ರೆ ಯಾವ ವರ್ಷದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಎಷ್ಟು ಮಳೆಯಾಗಿದೆ ಎಂಬುದನ್ನು ನೋಡೋವುದಾದರೆ, 2011 ರಲ್ಲಿ 217.1 ಮಿ.ಮೀ, 2012 ರಲ್ಲಿ 13.4 ಮಿ.ಮೀ, 2013 ರಲ್ಲಿ 23.3 ಮಿ.ಮೀ, 2014 ರಲ್ಲಿ 15, 2015 ರಲ್ಲಿ 226.5 ಮಿ.ಮೀ, 2016 ರಲ್ಲಿ 25.3 ಮಿ.ಮೀ, 2017 ರಲ್ಲಿ 30.4 ಮಿ.ಮೀ, 2018 ರಲ್ಲಿ 53.4 ಮಿ.ಮೀ, 2019 ರಲ್ಲಿ 17.8 ಮಿ.ಮೀ, 2020 ರಲ್ಲಿ 121.1 ಮಿ.ಮೀ, 2021 ರಲ್ಲಿ 118.2 ಮಿ.ಮೀ, 2022 ರಲ್ಲಿ 135.3 ಮಿ.ಮೀ, 2023 ರಲ್ಲಿ 9, 2024 ರಲ್ಲಿ ಶೂನ್ಯ ಮಳೆ ದಾಖಲಾಗಿದೆ.
Advertisement
ಐಎಂಡಿ ಬೆಂಗಳೂರು ವೀಕ್ಷಣಾಲಯದ ಹಿರಿಯ ವಿಜ್ಞಾನಿ ಎ ಪ್ರಸಾದ್, ಈ ಏಪ್ರಿಲ್‌ನಲ್ಲಿ 41 ವರ್ಷಗಳಲ್ಲಿ ಅತ್ಯಂತ ಶುಷ್ಕ ಎಂದು ದೃಢಪಡಿಸಿದರು. 1983 ರ ನಂತರ ಬೆಂಗಳೂರಿನಲ್ಲಿ ಮಳೆಯಿಲ್ಲದೆ ಏಪ್ರಿಲ್ ಕಳೆದಿರುವುದು ಇದೇ ಮೊದಲು ಆಗಿದೆ. ಮಾನ್ಸೂನ್ ಋತುವಿನ ಮೊದಲು, ಎಲ್ ನಿನೋ ಸ್ಥಿತಿಯು ತಟಸ್ಥ ಅಥವಾ ಶೂನ್ಯಕ್ಕೆ ಪರಿವರ್ತನೆಯಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ, ನಂತರ ಲಾ ನಿನಾ ಪರಿಸ್ಥಿತಿಗಳ ಬೆಳವಣಿಗೆಯು ಮಾನ್ಸೂನ್ಗೆ ಉತ್ತಮವಾಗಿದೆ. ಈ ಮಾನ್ಸೂನ್ನಲ್ಲಿ ನಾವು ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.
Advertisement
ತೀವ್ರ ಶಾಖದ ಕಾರಣಗಳ ಬಗ್ಗೆ ಕೇಳಿದಾಗ, ಜಾಗತಿಕ ತಾಪಮಾನ, ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಕಳಪೆ ಮೋಡಗಳ ರಚನೆ ಮತ್ತು ಎಲ್ ನಿನೋ ಈ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಮಳೆ ಕೊರತೆಗೆ ಕಾರಣವಾಗಿವೆ ಎಂದರು.
Advertisement
ಬೆಂಗಳೂರು 2023 ರ ನವೆಂಬರ್‌ನಲ್ಲಿ ಸುಮಾರು 106.6 ಮಿಮೀ ಮಳೆಯನ್ನು ದಾಖಲಿಸಿದೆ. ಅಂದಿನಿಂದ ಯಾವುದೇ ಗಮನಾರ್ಹ ಮಳೆ ಇಲ್ಲ. 2023 ರ ಡಿಸೆಂಬರ್ ನಲ್ಲಿ 0.7 ಮಿಮೀ, 2024 ರ ಜನವರಿಯಲ್ಲಿ 2 ಮಿಮೀ ಮತ್ತು 2024 ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಮಳೆಯ ಕುರುಹು ಇಲ್ಲ. ಏಪ್ರಿಲ್ 19 ಮತ್ತು 20 ರಂದು ಕೆಲವು ಪ್ರದೇಶಗಳಲ್ಲಿ ಮಳೆಯಾದರೂ, ನಗರದ ವೀಕ್ಷಣಾಲಯವು ಅದನ್ನು ದಾಖಲಿಸಲಿಲ್ಲ.
Advertisement
ಸಮುದ್ರ ಮಟ್ಟದಿಂದ 3,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಬೆಂಗಳೂರು ಇದೆ. ಹೀಗಾಗಿ ನಗರ ಆಹ್ಲಾದಕರ ಹವಾಮಾನವನ್ನು ಹೊಂದಿದ್ದು, ಪ್ರಪಂಚದಾದ್ಯಂತದ ಯುವ, ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸುತ್ತದೆ. ಆದಾಗ್ಯೂ, ಈ ಬಾರಿ, ಬೇಸಿಗೆಯು ಕಠಿಣವಾಗಿದೆ – ನವೆಂಬರ್ 2023 ರಿಂದ ಮಳೆಯಿಲ್ಲ, ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ ಮತ್ತು ನೀರು ಸರಬರಾಜು ಕಡಿಮೆಯಾಗಿದೆ ಮತ್ತು ನಿರ್ಬಂಧಿಸಲಾಗಿದೆ.
ಒಟ್ಟಿನಲ್ಲಿ ಬಿಸಿಲ ದಗೆಗೆ ಐಟಿಬಿಟಿ ಸಿಟಿ ಕಂಗಾಲಾಗಿದೆ. ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷ ಏಪ್ರಿಲ್ ನಲ್ಲಿ ಮಳೆ ಬಂದಿಲ್ಲ. ಬಿಸಿಲ ಝಳಕ್ಕೆ ಉದ್ಯಾನಗರಿ ದಾಖಲೆ ಬರೆದಿದೆ. ಈ ಮೂಲಕ 1983ರಲ್ಲಿ ನ ವಿದ್ಯಮಾನ ಮತ್ತೆ ಮರುಕಳಿಸಿದೆ. ಶೇಕಡಾ ನೂರರಷ್ಟು ಮಳೆ ಕೊರತೆ ಎದುರಿಸಿದೆ. 1983 ರಲ್ಲಿ ಏಪ್ರಿಲ್ ತಿಂಗಳಲ್ಲಿ ಈ ವರ್ಷದಂತೆ ಮಳೆ ಆಗಿರಲಿಲ್ಲ. ಅದಾದ ಬಳಿಕ ಏಪ್ರಿಲ್ ತಿಂಗಳಲ್ಲಿ ಪ್ರತಿ ವರ್ಷ ಸಿಟಿಯಲ್ಲಿ ಮಳೆಯಾಗ್ತ ಇತ್ತು. ಆದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿದ್ದು, ಜನ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದಾರೆ.
ಏಪ್ರಿಲ್ 19 ಮತ್ತು 20 ರಂದು, ನಗರದ ಕೆಲವು ಭಾಗಗಳಲ್ಲಿ ಸ್ವಲ್ಪ ತುಂತುರು ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಹೀಗೆ ಸುಮಾರು 12 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಕೊರತೆ ಉಂಟಾಗಿದೆ. 8 ವರ್ಷಗಳ ಬಳಿಕ ಅತಿ ಕೆಟ್ಟ ಬೇಸಿಗೆಗೆ ಕರುನಾಡು ಸಿಲುಕಿದೆ. 2016 ರ ಬಳಿಕ ರಾಜ್ಯ ಕಂಡಂತಹ ಭೀಕರ ಬರಗಾಲ ದಾಖಲಾಗಿದೆ. 2016 ರ ಬಳಿಕ ತಾಪಮಾನ ಏರಿಕೆ, ಅತಿ ಬಿಸಿಲಿನ ದಿನಗಳು, ಶೂನ್ಯ ಮಳೆ ಎದುರಿಸಿ ಕರುನಾಡು ಕಂಗಾಲಾಗಿದೆ. 2016 ಏಪ್ರಿಲ್ ಸರಾಸರಿ ದಾಖಲೆ ಮೀರಿ ತಾಪಮಾನ ದಾಖಲಾಗಿದೆ.
2016 ಏಪ್ರಿಲ್ ನಲ್ಲಿ ಸರಾಸರಿ ತಾಪಮಾನ 36.51 ಡಿಗ್ರಿ ತಾಪಮಾನ ದಾಖಲಾಗುವ ಮೂಲಕ 2024 ರ ಈ ವರ್ಷದ ಏಪ್ರಿಲ್ ನಲ್ಲಿ ಸರಾಸರಿ ತಾಪಮಾನ 36.64 ಡಿಗ್ರಿಗೆ ಏರಿಕೆಯಾಗಿದೆ. 2016 ಏಪ್ರಿಲ್ ತಿಂಗಳಲ್ಲಿ 11 ದಿನಗಳು 37 ಡಿಗ್ರಿ ತಾಪಮಾನ ದಾಟಿತ್ತು, ಈ ಬಾರಿ 17 ದಿನಗಳು 37 ಡಿಗ್ರಿ ತಾಪಮಾನ ದಾಟಿದೆ. 2016 ರಲ್ಲಿ ತಾಪಮಾನ 2 ದಿನ 38 ಡಿಗ್ರಿ ತಾಪಮಾನ ದಾಖಲಾಗಿತ್ತು. ಈ ಬಾರಿ 3 ದಿನಗಳು 38 ಡಿಗ್ರಿ ದಾಟಿದೆ. ಈ ಮೂಲಕ 2024 ರಲ್ಲಿ 2016 ಕ್ಕಿಂತ ಕೆಟ್ಟ ಬೇಸಿಗೆಯನ್ನು ಸಹಿಸಬೇಕಿದೆ. ಜೊತೆಗೆ ಈ ಬಾರಿ ಕಳೆದ ನವೆಂಬರ್ ನಿಂದ ಇಲ್ಲಿಯ ತನಕ ಸತತ 6 ತಿಂಗಳ ಒಣ ಹವೆ ಎದುರಿಸಿದೆ. ಒಟ್ಟಾರೆಯಾಗಿ 1983 ರ ಬಳಿಕ ಏಪ್ರಿಲ್ ನಲ್ಲಿ ದಾಖಲಾದ ಅತಿ ಹೆಚ್ಚಿನ ಒಣಹವೆ ಉಂಟಾದ ವರ್ಷ ಇದಾಗಿದೆ.