ಪಾಕಿಸ್ತಾನ ಚುನಾವಣೆ ಫಲಿತಾಂಶ – ಯಾವುದೇ ಪಕ್ಷಕ್ಕಿಲ್ಲ ಗೆಲುವಿನ ರನ್ – ಪೊಲಿಟಿಕಲ್ ಸೆಂಚುರಿ ಬಾರಿಸಿದ ಇಮ್ರಾನ್ ಖಾನ್

Public TV
1 Min Read
Pakistn election 1

ಇಸ್ಲಾಮಾಬಾದ್: ಬುಧವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲ ಯಾವುದೇ ಪಕ್ಷಕ್ಕೆ ಸಿಕ್ಕಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ.

272 ಸ್ಥಾನಗಳ ಪೈಕಿ ಮಾಹಿತಿ ಪ್ರಕಾರ ಪಿಟಿಐ 112 ಸ್ಥಾನ ಗೆದ್ದಿದ್ರೆ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ (Pakistan Muslim League) ಪಾರ್ಟಿ 63 ಸ್ಥಾನ, ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ (Pakistan Peoples Party) 38 ಸ್ಥಾನಗಳನ್ನು ಪಡೆದಿದೆ. ಇತರರು ಬರೋಬ್ಬರಿ 57 ಕಡೆ ಜಯಭೇರಿ ಬಾರಿಸಿದ್ದಾರೆ. ಇವತ್ತು ಮಧ್ಯಾಹ್ನ ಸ್ಪಷ್ಟ ಚಿತ್ರಣ ಸಿಗಲಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಪಾಕಿಸ್ತಾನ ರಾಜಕೀಯ ಅಂಗಳದಲ್ಲಿ ಮೈತ್ರಿ ಚರ್ಚೆಗಳು ಆರಂಭಗೊಂಡಿವೆ. ಈ ಚುನಾವಣೆಯಲ್ಲಿ ಬೃಹತ್ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಪಿಎಂಎಲ್-ಎನ್‍ಪಕ್ಷದ ಪ್ರಧಾನಿ ಅಭ್ಯರ್ಥಿ ಶಾಹಬಾಜ್ ಷರೀಫ್ ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿದ್ದು ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಭಯಾನಕ ರಾಜಕೀಯ ದೃಶ್ಯ ನೋಡಿಲ್ಲ. ಪಾಕಿಸ್ತಾನದ ಇತಿಹಾಸದಲ್ಲಿ ಇದು ಕೆಟ್ಟ ಚುನಾವಣೆ ಎಂದಿದ್ದಾರೆ. ಇನ್ನು ಪಿಟಿಐ ಬೆಂಬಲಿಗರು ಲಾಹೋರ್, ಇಸ್ಲಾಮಾಬಾದ್, ಮುಲ್ತಾನ್ ಸೇರಿ ಹಲವೆಡೆ ನೃತ್ಯ, ಬಾಣ ಬಿರುಸುಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಇನ್ನು ಪಾಕಿಸ್ತಾನ ಚುನಾವಣೆಯಲ್ಲಿ ಮುಂಬೈ ದಾಳಿಯ ಸಂಚುಕೋರ, ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಬೆಂಬಲಿಸಿದ್ದ ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಾರ್ಟಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಚುನಾವಣೆಯಲ್ಲಿ ಹಫೀಜ್ ಸಯೀದ್ ಬೆಂಬಲದೊಂದಿಗೆ ಎಎಟಿ ಪಕ್ಷದ ವತಿಯಿಂದ 200ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಯಾವುದೇ ಅಭ್ಯರ್ಥಿ ಕನಿಷ್ಠ ಠೇವಣಿಯನ್ನು ಪಡೆಯದೇ ಹೀನಾಯವಾಗಿ ಸೋತಿರುವುದು ಹಫೀಜ್‍ಗೆ ತೀವ್ರ ಮುಖಭಂಗವಾಗಿದೆ.

Pakistn election

Share This Article
Leave a Comment

Leave a Reply

Your email address will not be published. Required fields are marked *