ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

Public TV
1 Min Read
pakistan protest

– ಪಾಕ್ ಪ್ರಧಾನಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನ (Arrest) ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರೊಟೆಸ್ಟ್‍ನಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸುಮಾರು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫವಾದ್ ಚೌಧರಿ ಮತ್ತು ಅಸದ್ ಉಮರ್ ಸೇರಿದಂತೆ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹಲವಾರು ನಾಯಕರನ್ನು ಕೂಡ ಬಂಧಿಸಲಾಯಿತು. ಅಷ್ಟೇ ಅಲ್ಲದೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಲಾಹೋರ್ ನಿವಾಸದ ಮೇಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ಬುಧವಾರ ದಾಳಿ ನಡೆಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ 500ಕ್ಕೂ ಹೆಚ್ಚು ದುಷ್ಕರ್ಮಿಗಳು ಬುಧವಾರ ನಸುಕಿನಲ್ಲಿ ಪ್ರಧಾನಿಯವರ ಮಾಡೆಲ್ ಟೌನ್ ಲಾಹೋರ್ ನಿವಾಸಕ್ಕೆ ತಲುಪಿ ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

Imran Khan 2

ಮಂಗಳವಾರ ಮಧ್ಯಾಹ್ನ ಬಂಧನಕ್ಕೊಳಗಾಗಿದ್ದ ಖಾನ್ ಅವರನ್ನು ಬುಧವಾರ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‍ಎಬಿ)ಗೆ ಹಸ್ತಾಂತರಿಸಲಾಗಿದೆ. ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಅವರನ್ನು ಎಂಟು ದಿನಗಳ ಕಾಲ ಕಸ್ಟಡಿಯಲ್ಲಿ ಇಡಲಾಗುವುದು.

ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‍ನ ಹೈಕೋರ್ಟ್ ತೆರಳುತ್ತಿದ್ದ ವೇಳೆಯೇ ಇಮ್ರಾನ್‍ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು. ಪೇಶಾವರದಲ್ಲಿ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿತ್ತು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

Imran Khan 2

ಇಸ್ಲಾಮಾಬಾದ್‍ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ – ಸಾವಿರ ಮಂದಿ ಬಂಧನ

Share This Article