ಚೆನ್ನೈ: ಏಕಭಾಷೆ ಪರಿಕಲ್ಪನೆ ದೇಶದ ಬೆಳವಣಿಗೆಗೆ ಒಳ್ಳೆಯದು. ದುರದೃಷ್ಟಕರ ಸಂಗತಿ ಎಂದರೆ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲದಿರುವುದು. ಹೀಗಾಗಿ ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಏಕಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಏಕ ಭಾಷಾ ಸೂತ್ರ ಭಾರತಕ್ಕೆ ಮಾತ್ರವಲ್ಲ ಯಾವುದೇ ದೇಶದ ಏಕತೆ ಹಾಗೂ ಪ್ರಗತಿಗೆ ಒಳ್ಳೆಯದು. ಆದರೆ ದುರದೃಷ್ಟವೆಂಬಂತೆ ನಮ್ಮ ದೇಶದಲ್ಲಿ ಸಾಮಾನ್ಯ ಭಾಷೆಯನ್ನು ತರಲು ಸಾಧ್ಯವಿಲ್ಲ. ಆದ್ದರಿಂದ ನೀವು ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು ರಜನಿಕಾಂತ್ ತಿಳಿಸಿದ್ದಾರೆ.
Advertisement
Rajinikanth: Hindi shouldn't be imposed. Not just Tamil Nadu but none of the southern states will accept imposition of Hindi. Not only Hindi, no language should be imposed. If there's a common language it's good for country's unity&progress but forcing a language isn't acceptable pic.twitter.com/cP3KzihTgw
— ANI (@ANI) September 18, 2019
Advertisement
ವಿಶೇಷವಾಗಿ ತಮಿಳುನಾಡಿನಲ್ಲಿ ಮಾತ್ರವಲ್ಲ, ಹಿಂದಿ ಹೇರಿದಲ್ಲಿ ದಕ್ಷಿಣ ಭಾರತ ಯಾವುದೇ ರಾಜ್ಯಗಳು ಅದನ್ನು ಸ್ವೀಕರಿಸುವುದಿಲ್ಲ. ಉತ್ತರ ಭಾರತದಲ್ಲಿಯೂ ಅನೇಕ ರಾಜ್ಯಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
ಹಿಂದಿಯೇತರ ರಾಜ್ಯಗಳಲ್ಲಿ ಭಾಷೆಯನ್ನು ಹೇರಲು ಈ ಹಿಂದೆ ಸಾಕಷ್ಟು ಬಾರಿ ಪ್ರಯತ್ನ ಮಾಡಲಾಗಿದೆ ಆದರೂ ಅದು ಸಾಧ್ಯವಾಗಿಲ್ಲ. ಇದೀಗ ಏಕ ಭಾಷಾ ಸೂತ್ರವನ್ನು ಅಮಿತ್ ಶಾ ಮತ್ತೊಮ್ಮೆ ಉಚ್ಛರಿಸಿದ್ದರು.
Advertisement
`ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದರು. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು `ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದರು.
ಭಾರತವನ್ನು ಒಂದುಗೂಡಿಸುವ ಸಾಮಥ್ರ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದರು.
ಈ ಬಗ್ಗೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ. ಅದೇ ರೀತಿ ಕರ್ನಾಟಕದಲ್ಲಿಯೂ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡದ ಮಹತ್ವ ಹಾಗೂ ಅಸ್ಮಿತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಅಲ್ಲದೆ, ಕನ್ನಡ ಹಾಗೂ ರಾಜ್ಯದ ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧರಾಗಿದ್ದೇವೆ ಎಂದು ಅಮಿತ್ ಶಾ ಹೇಳಿಕೆಗೆ ಕುಟುಕ್ಕಿದ್ದರು.
ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ.#Kannada
— CM of Karnataka (@CMofKarnataka) September 16, 2019
ಈ ಕುರಿತು ನಟ-ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿ, ಭಾರತ ಗಣತಂತ್ರವಾದಾಗಲೇ ವೈವಿಧ್ಯತೆಯಲ್ಲಿ ಏಖತೆಯಿಂದ ಕೂಡಿದೆ ಎಂದು ಪ್ರಮಾಣೀಕರಿಸಲಾಗಿದೆ. ಇದೀಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಇದನ್ನು ಹುಸಿಗೊಳಿಸಬಾರದು ಎಂದು ಸೋಮವಾರ ಪ್ರತಿಕ್ರಿಯಿಸಿದ್ದರು.