ವಿಜಯದಶಮಿ ವೇಳೆ ಶಮಿ ಮರಕ್ಕೆ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು ಹೇಳುತ್ತೆ?

Public TV
4 Min Read
Vijaya dashami copy

ನವರಾತ್ರಿ ವೇಳೆ ಅನೇಕ ರೂಪಗಳ ದೇವಿಗೆ ಅರ್ಚನೆ ನಡೆಯುತ್ತದೆ. ಇದರ ಜೊತೆಯಲ್ಲೇ ಮಹಾನಮಿಯ ದಿನದಂದು ಬನ್ನಿ (ಶಮಿ) ವೃಕ್ಷದ ಪೂಜೆ ನಡೆಯುತ್ತದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಅರಳಿ ಮರ ಇದ್ದರೂ ನವಮಿಯಂದು ಶಮಿ ವೃಕ್ಷಕ್ಕೆ ಯಾಕೆ ವಿಶೇಷ ಪೂಜೆ ಎನ್ನುವ ಪ್ರಶ್ನೆಗೆ ಪುರಾಣದಲ್ಲಿ ಉತ್ತರ ಸಿಗುತ್ತದೆ.

ಪುರಾಣದಲ್ಲಿ ಏನಿದೆ?
ಮಹಾತಪಸ್ವಿಯಾದ ಜಾರ್ವ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಹೆಸರಿನ ಪುತ್ರಿ ಇರುತ್ತಾಳೆ. ಆಕೆಯನ್ನು ಧೌಮ್ಯ ಋಷಿಯ ಪುತ್ರ ಮತ್ತು ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದ ಮಂದಾರನಿಗೆ ಕೊಟ್ಟು ವಿವಾಹ ಮಾಡುತ್ತಾರೆ. ಕೆಲ ದಿನಗಳ ನಂತರ ನವ ದಂಪತಿ ವಾಯುವಿಹಾರಕ್ಕೆ ಹೋದಾಗ ವನದಲ್ಲಿ ಭೃಶುಂಡಿ (ಸೊಂಡಿಲು ಹೊಂದಿದ್ದ) ಮುನಿಯನ್ನು ನೋಡುತ್ತಾರೆ. ಮುನಿಯ ವಿಚಿತ್ರ ರೂಪವನ್ನು ಕಂಡು ಅವರಿಗೆ ಎಲ್ಲಿಲ್ಲದ ನಗು ಬರುತ್ತದೆ. ಇದನ್ನು ನೋಡಿದ ಭೃಶುಂಡಿಮುನಿ, ನನ್ನನ್ನು ನೋಡಿ ನಕ್ಕಿದ್ದು ಏಕೆ ಎಂದು ಪ್ರಶ್ನಿಸುತ್ತಾನೆ.

Vijaya dashami 3 copy

ಮುನಿ ಪ್ರಶ್ನೆ ಕೇಳಿದ್ದರೂ ದಂಪತಿ ಮಾತ್ರ ನಗುತ್ತಲೇ ಇರುತ್ತಾರೆ. ತನ್ನನ್ನು ಅಪಹಾಸ್ಯ ಮಾಡಿದ್ದಕ್ಕೆ ಕೋಪಗೊಂಡ ಭೃಶುಂಡಿ ಮುನಿ, ನೀವು ಯಾವುದೇ ಪ್ರಾಣಿಗೂ ಉಪಯೋಗಕ್ಕೆ ಬಾರದ ಮರಗಳಾಗಿ ಎಂದು ಶಾಪ ಕೊಡುತ್ತಾನೆ. ಕೂಡಲೇ ದಂಪತಿಗೆ ತಮ್ಮ ತಪ್ಪಿನ ಅರಿವಾಗಿ ಮುನಿಯ ಪಾದಕ್ಕೆ ಬಿದ್ದು, ಕ್ಷಮೆ ಕೇಳಿ ತಮ್ಮ ಶಾಪ ವಿಮೋಚನೆ ಆಗುವುದು ಹೇಗೆ ಎಂದು ಅಂಗಲಾಚುತ್ತಾರೆ. ಇದಕ್ಕೆ ಭೃಶುಂಡಿ ನಿಮಗೆ ಗಣಪತಿ ಅನುಗ್ರಹವಾದ ಮೇಲೆಯೇ ಶಾಪ ವಿಮೋಚನೆ ಆಗುತ್ತದೆ ಎಂದು ಉತ್ತರಿಸುತ್ತಾನೆ.

ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಪರಿವರ್ತನೆ ಆಗುತ್ತಾರೆ. ಬಹಳ ಸಮಯವಾದರೂ ದಂಪತಿ ಮನೆಗೆ ಬಾರದಿದ್ದಾಗ ಶಮೀಕಳ ತಂದೆ-ತಾಯಿ ಕಾಡಿನೊಳಗೆ ಬರುತ್ತಾರೆ. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡು, ಭೃಶುಂಡಿ ಮುನಿಯನ್ನು ವಿಚಾರಿಸಿದಾಗ ನಡೆದ ಸಂಗತಿ ತಿಳಿಯುತ್ತದೆ.

Vijaya dashami copy 1

ಮಗಳು ಹಾಗೂ ಅಳಿಯನ ಶಾಪವಿಮೋಚನೆಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಜಾರ್ವ-ಸಮೇಧ ದಂಪತಿ ಪಟಿಸಲು ಆರಂಭಿಸುತ್ತಾರೆ. ಸ್ವಲ್ಪ ಸಮಯದ ಬಳಿಕ ಗಣಪತಿ ಪ್ರತ್ಯಕ್ಷನಾಗಿ, ಶಾಪ ವಿಮೋಚನೆ ಮಾಡುತ್ತಾನೆ. ಮರವಾಗಿದ್ದ ಶಮೀಕಾ ಹಾಗೂ ಮಂದಾರ ಮೊದಲಿನಂತೆ ಆಗುತ್ತಾರೆ.

ವಿಜಯದಶಮಿ ದಿನದಂದು ಸಾಧಾರಣವಾಗಿ ಒಂದು ಶ್ಲೋಕ ಪ್ರಚಲಿತದಲ್ಲಿದೆ. ಈ ಶ್ಲೋಕವನ್ನು ಹೇಳಿಕೊಂಡು ಪರಸ್ಪರ ಶಮೀ ಪತ್ರೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕತ್ರ್ರಿತ್ವಂ ಭವ ಶ್ರೀರಾಮಪೂಜಿತಾ ||

Shami tree

ಶಮೀ (ಬನ್ನಿ) ವೃಕ್ಷವು ಪಾಪವನ್ನು ಹಾಗೂ ಶತ್ರುಗಳನ್ನು ಶಮನ ಮಾಡುತ್ತದೆ. ಅದು ಅರ್ಜುನನ ಬಾಣವನ್ನು ಕಾಪಾಡಿದ್ದು, ರಾಮನಿಗೆ ಅತಿ ಪ್ರೀಯವಾಗಿರುವುದು ಆಗಿದೆ. ಸದಾ ಕಾಲವು ಸುಖವನ್ನು ನೀಡುತ್ತದೆ. ರಾಮನು ಕೂಡಾ ಬನ್ನಿ ಮರವನ್ನು ಪೂಜಿಸಿದ್ದ. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು ಎಂದು ಶ್ಲೋಕದ ಮೂಲಕ ಕೇಳಿಕೊಳ್ಳಲಾಗುತ್ತದೆ.

ಪಾಂಡವರಿಂದ ಬನ್ನಿ ಮರದ ಪೂಜೆ:
ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತ ವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಅಜ್ಞಾತ ವಾಸದಿಂದ ಮರಳಿದ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ. ಯಾರೊಬ್ಬರೂ ಅವುಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ. ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿಕೊಂಡು ಬಂದ ಬನ್ನಿ ಮರಕ್ಕೆ ನಮಸ್ಕರಿಸುತ್ತಾರೆ. ಬಳಿಕ ನಡೆದ ಕೌರವರ ಜೊತೆಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯ ದಶಮಿಯ ದಿನ ಬನ್ನಿ ಪೂಜೆ ಮಾಡುತ್ತಾರೆ. ಅಂದಿನಿಂದ ಬನ್ನಿಯ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.

Shami tree 1

ಬನ್ನಿಯನ್ನು ಬಂಗಾರ ಎನ್ನುವುದೇಕೆ?
ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ. ಕೌಸ್ತ ಹೆಸರಿನ ವಿದ್ಯಾರ್ಥಿಯ ವಿದ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ. ಇದನ್ನು ಗುರುಗಳ ಜೊತೆಗೆ ಹಂಚಿಕೊಳ್ಳುತ್ತಾನೆ. ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.

ಗುರುಗಳ ಕೇಳಿದಷ್ಟು ಚಿನ್ನದ ನಾಣ್ಯಗಳನ್ನು ಎಲ್ಲಿಂದ ತರುವುದು ಎಂದು ಯೋಚಿಸುತ್ತಾನೆ. ನಂತರ ರಘು ರಾಜನ ಬಳಿಗೆ ಹೋಗಿ, ಗುರುಗಳಿಗೆ ನೀಡಲು ಸಹಸ್ರ ಕೋಟಿ ಚಿನ್ನದ ನಾಣ್ಯಗಳು ಬೇಕು ದಯವಿಟ್ಟು ಕೊಡಿ ಎಂದು ಕೌಸ್ತ ಮನವಿ ಮಾಡಿಕೊಳ್ಳುತ್ತಾನೆ. ರಾಜನು ಕುಬೇರನನ್ನು ಪ್ರಾರ್ಥಿಸಿದಾಗ ಅಲ್ಲಿಯೇ ಇದ್ದ ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾಗುತ್ತವೆ. ಇದರಿಂದ ಸಂತಸಗೊಂಡ ಕೌಸ್ತನು ನಾಣ್ಯಗಳನ್ನು ಗುರುಗಳಿಗೆ ಅರ್ಪಿಸುತ್ತಾನೆ. ಗುರುದಕ್ಷಿಣೆ ನೀಡಿ, ಉಳಿದ ನಾಣ್ಯಗಳನ್ನು ದಾನ ಮಾಡುತ್ತಾನೆ. ಆದ್ದರಿಂದ ಶಮೀ (ಬನ್ನಿ) ಮರವೆಂದರೇ ಚಿನ್ನ, ಬಂಗಾರ ಎನ್ನುವ ನಂಬಿಕೆ ಮೂಡಿಬಂದಿದೆ

Vijaya dashami 5 copy

ಆರೋಗ್ಯಕ್ಕೂ ಒಳ್ಳೇಯದು:
ಧನ್ವಂತರಿ ನಿಘಂಟಿನ ಪ್ರಕಾರ, `ಪಂಚಭೃಂಗ’ ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಯಾವುದೇ ವ್ಯಕ್ತಿಯ ರೋಗ ಗುಣಪಡಿಸಿದ ನಂತರ ಸ್ನಾನ ಮಾಡಲು ಈ ಐದು ಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೇ ಶಕ್ತಿಯನ್ನು ಉತ್ತೇಜಿಸುತ್ತದೆ. ಈ ಮರದ ತೊಗಟೆಯನನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸುವುದು ವಿಶೇಷ. ಶುಂಠಿಯೊಂದಿಗೆ ಬೆರೆಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ. ಕೃಷಿಯಲ್ಲಿ ಬೆಳೆಗಳಿಗೆ ಸುಗಮವಾಗಲೆಂದು, ಬೆಳೆಗಳ ಮಧ್ಯ ಈ ಮರವನ್ನು ಬೆಳೆಸಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Vijaya dashami 4 copy 1

Share This Article
Leave a Comment

Leave a Reply

Your email address will not be published. Required fields are marked *