ದೇವತೆಗಳ ತ್ಯಾಗವನ್ನು ಸ್ಮರಿಸುವ ದಸರಾ ಗೊಂಬೆ!

Public TV
2 Min Read
DASARA 1

ದುರ್ಗಾ ದೇವಿ ರಾಕ್ಷಸ ಮಹಿಷಾಸುರನ ವಿರುದ್ಧ ಯುದ್ಧ ಮಾಡುವಾಗ ಅವಳಿಗೆ ಎಲ್ಲಾ ದೇವತೆಗಳು ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾಗಿ ನಿಂತರು. ಬಳಿಕ ದಸರಾ (Dasara) ಎಂದು ಆಚರಿಸಲಾಗುವ ಯುದ್ಧದ 10ನೇ ದಿನದಂದು ದುರ್ಗಾದೇವಿ ಮಹಿಷಾಸುರನನ್ನು ಗೆದ್ದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ದೇವತೆಗಳ ಶಕ್ತಿಯ ತ್ಯಾಗಕ್ಕೆ ಗೌರವ ಸಲ್ಲಿಸಲು ಗೊಂಬೆಗಳ ರೂಪದಲ್ಲಿ ದೇವರನ್ನು ಪೂಜಿಸುವ ಮೂಲಕ ದಸರಾ ಗೊಂಬೆ (Dasara Gombe) ಹಬ್ಬವನ್ನು ಆಚರಿಸಲಾಗುತ್ತದೆ.

ನವರಾತ್ರಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ದೇಶದಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಆಚರಿಸುತ್ತವೆ. ಇದಕ್ಕಾಗಿ ವಿಶೇಷ ಶೈಲಿಯ ಪದ್ಧತಿಗಳನ್ನು ಹೊಂದಿವೆ.

Dasara Gombe 2

ದಕ್ಷಿಣ ಭಾರತದಲ್ಲಿ ಈ ಹಬ್ಬದ ಭಾಗವಾಗಿ ದಸರಾ ಗೊಂಬೆ ಎಂದು ಕರೆಯಲ್ಪಡುವ ವಿಶಿಷ್ಟ ಪೂಜೆಯ ಆಚರಣೆ ಒಂದಿದೆ. ಇದನ್ನು ಕರ್ನಾಟಕ (Karnataka) ಮತ್ತು ಆಂಧ್ರಪ್ರದೇಶದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ವಿಜಯದಶಮಿ ದಿನದಂದು ಈ ಆಚರಣೆ ಅಂತ್ಯಗೊಳ್ಳುತ್ತದೆ. 9 ದಿನಗಳ ಕಾಲ ಹೋರಾಡಿದ ನಂತರ ದುರ್ಗಾ ದೇವಿ ರಾಕ್ಷಸರ ವಿರುದ್ಧ ಯುದ್ಧವನ್ನು ಗೆದ್ದ ದಿನ ಕರ್ನಾಟಕದಲ್ಲಿ ದಸರಾ ಗೊಂಬೆ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.

ಸಂಪ್ರದಾಯದಂತೆ ಜೋಡಿಸಲಾದ ವಿವಿಧ ಗೊಂಬೆಗಳು ಮತ್ತು ಪ್ರತಿಮೆಗಳ ಪ್ರದರ್ಶನದ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗೊಂಬೆಗಳನ್ನು ಬೆಸ ಸಂಖ್ಯೆಯಲ್ಲಿ (7, 9 ಅಥವಾ 11) ಮೆಟ್ಟಿಲಿನಂತೆ ಜೋಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಗೊಂಬೆಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.

Dasara Gombe

ಗಂಡ ಮತ್ತು ಹೆಂಡತಿಯನ್ನು ಗೊಂಬೆಗಳು, ಅದನ್ನು ಪಟ್ಟದ ಗೊಂಬೆ ಎಂದು ಕರೆಯಲಾಗುತ್ತದೆ. ಈ ಮುಖ್ಯ ಗೊಂಬೆಗಳ ಗುಂಪನ್ನು ಮಗಳ ಮದುವೆ ಸಮಾರಂಭದಲ್ಲಿ ಆಕೆಯ ಪೋಷಕರು ಹಸ್ತಾಂತರಿಸುತ್ತಾರೆ. ಹೊಸ ವಧುವಿಗೆ ತನ್ನ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಮತ್ತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಅವುಗಳನ್ನು ನೀಡಲಾಗುತ್ತದೆ.

ಪಟ್ಟದ ಗೊಂಬೆಗಳು ಸಾಂಪ್ರದಾಯಿಕವಾಗಿ ಮರದಿಂದ ಮಾಡಿದ ಗೊಂಬೆಗಳಾಗಿವೆ. ಈ ಗೊಂಬೆಗಳನ್ನು ರೇಷ್ಮೆ ಬಟ್ಟೆ ಬಳಸಿ ಸುಂದರವಾಗಿ ಅಲಂಕರಿಸಲಾಗುತ್ತದೆ. ಪೂಜೆಗೆ ಗೊಂಬೆಗಳನ್ನು ಜೋಡಿಸುವಾಗ ವೇದಿಕೆಯ ಮೊದಲ ಮೆಟ್ಟಿಲಲ್ಲಿ ದೇವತೆಗಳ ಗೊಂಬೆಗಳನ್ನು ಜೋಡಿಸುವ ಸಂಪ್ರದಾಯವಿದೆ. ಈ ಸಾಲಿನಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ದುರ್ಗಾ, ಲಕ್ಷ್ಮಿ, ಸರಸ್ವತಿ ಇಂತಹ ಮೂರ್ತಿಗಳನ್ನು ಇಡಲಾಗುತ್ತದೆ.

ಗೊಂಬೆ ಹಬ್ಬವನ್ನು ಪ್ರಾರಂಭಿಸಲು ಸೂಕ್ತ ಮುಹೂರ್ತ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಗೊಂಬೆಗಳನ್ನು ನಿರ್ದಿಷ್ಟ ಕ್ರಮದ ಪ್ರಕಾರ ಜೋಡಿಸಲಾಗುತ್ತದೆ. ದೇವರ ಗೊಂಬೆಗಳನ್ನು ಮೇಲಿನ ಹಂತದಲ್ಲಿ ಇರಿಸಲಾಗುತ್ತದೆ. ಮನುಷ್ಯರ ಹಾಗೂ ಇತರೆ ಗೊಂಬೆಗಳನ್ನು ಕೊನೆಯ ಸಾಲಿನಲ್ಲಿ ಇರಿಸಲಾಗುತ್ತದೆ.

ಉಳಿದಂತೆ ರಾಜರು ಮತ್ತು ರಾಣಿಯರ ಗೊಂಬೆಗಳನ್ನು ಜೋಡಿಸಲಾಗುತ್ತದೆ. ಕರ್ನಾಟಕದಲ್ಲಿ ಮೈಸೂರು ರಾಜರ ಗೊಂಬೆಗಳನ್ನೂ ಇರಿಸುವ ವಾಡಿಕೆ ಇದೆ. ಅಲ್ಲದೇ ದಿನ ನಿತ್ಯದ ಜನಜೀವನವನ್ನು ಹೋಲುವ ಗೊಂಬೆಗಳನ್ನು ಸಹ ಇಲ್ಲಿ ಇರಿಸಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಜನ ಗೊಂಬೆಗಳನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಹೀಗೆ ಕೆಲವೆಡೆ ಶತಮಾನಗಳನ್ನು ಪೂರೈಸಿದ ಗೊಂಬೆಗಳು ಸಂಗ್ರಹದಲ್ಲಿವೆ. ಅಲ್ಲದೇ ಪೂಜೆಯ ದಿನ ಸ್ನೇಹಿತರನ್ನು ನೆರೆಹೊರೆಯವರನ್ನು ಕರೆದು ಪ್ರಸಾದ ವಿತರಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅಸ್ತಿತ್ವದಿಂದಲೂ ಈ ಪದ್ಧತಿಯು ಆಚರಣೆಯಲ್ಲಿದೆ ಎನ್ನಲಾಗಿದೆ.

Web Stories

Share This Article