ಹಾಸನ: ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪಂಪ್‍ಹೌಸ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಅಶ್ವಿನಿ(36) ಕೊಲೆಯಾದ ಮಹಿಳೆಯಾಗಿದ್ದು, ಕೊಲೆ ಮಾಡಿದ ನಂತರ ಪತಿ ಜಗದೀಶ್ ಪರಾರಿಯಾಗಿದ್ದಾನೆ. ಶಾಲೆಯಿಂದ ಬಂದ ಮಕ್ಕಳು ಮನೆ ಬಾಗಿಲು ತೆರೆದು ಒಳಹೋದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ
ಏನಿದು ಘಟನೆ?
ಅಶ್ವಿನಿ ಹಾಗೂ ಜಗದೀಶ್ 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿತ್ತು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಜಗದೀಶ್ ಅದನ್ನು ಬಿಟ್ಟು ಮೆಡಿಕಲ್ ಶಾಫ್ ಇಟ್ಟುಕೊಂಡಿದ್ದ. ಲಾಸ್ ಆದ ಕಾರಣ ಅಂಗಡಿ ಕ್ಲೋಸ್ ಮಾಡಿದ್ದ.
ಹಣಕಾಸು ವಿಚಾರಕ್ಕೆ ಆಗಾಗ್ಗೆ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಜಗದೀಶ್ ಒಮ್ಮೆ ಅಶ್ವಿನಿಗೆ ಹಲ್ಲೆ ಮಾಡಿದ್ದ ಪರಿಣಾಮ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದಾದ ನಂತರ ಬೇರೊಬ್ಬ ಮಹಿಳೆಯೊಂದಿಗೆ ಜಗದೀಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಅಶ್ವಿನಿ ವಿರೋಧಿಸಿದ್ದಕ್ಕೆ ಹಲವು ಬಾರಿ ಹಲ್ಲೆ ನಡೆಸಿದ್ದ. ಇದರಿಂದ ಬೇಸತ್ತ ಅಶ್ವಿನಿ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.
ನಾಲ್ಕು ತಿಂಗಳ ಹಿಂದಷ್ಟೇ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಶ್ವಿನಿ ಮೆಡ್‍ಪ್ಲಸ್‍ಗೆ ಕೆಲಸಕ್ಕೆ ಹೋಗುತ್ತಿದ್ದಳು. ಜೀವನಾಂಶ ನೀಡಬೇಕು ಎನ್ನುವ ಕಾರಣಕ್ಕೆ ಮಗನನ್ನು ಕರೆದುಕೊಂಡು ಬಂದ ಜಗದೀಶ್, ಅಶ್ವಿನಿ ಹಾಗೂ ಮಕ್ಕಳ ಜೊತೆಯಲ್ಲಿ ವಾಸವಿದ್ದ.
ಬುಧವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ನಂತರ ಪತ್ನಿಯನ್ನು ಕೆಲಸಕ್ಕೆ ಬಿಟ್ಟು ಬಂದಿದ್ದ. ಮಧ್ಯಾಹ್ನ ಊಟಕ್ಕೆಂದು ಪತ್ನಿಯನ್ನು ಬೈಕ್‍ನಲ್ಲಿ ಮನೆಗೆ ಕರೆದುಕೊಂಡು ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಮಕ್ಕಳು ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ನೋಡಿದಾಗ ಅವರ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್
ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಶ್ವಿನಿ ಪೋಷಕರು ಬರುವಿಕೆಗಾಗಿ ಕಾಯುತ್ತಿದ್ದಾರೆ. ಇತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥವಾಗಿದ್ದು, ಪುಟ್ಟ ತಮ್ಮನನ್ನು ಅಕ್ಕ ಸಂತೈಸುತ್ತಿದ್ದು ಕರುಳು ಹಿಂಡುವಂತಿತ್ತು.