ಮೇಕೆದಾಟಿಗಾಗಿ ಸಂಸದ ಒಗ್ಗಟ್ಟು ಪ್ರದರ್ಶನ – ನೀರಾವರಿ, ಬರ ನಿರ್ವಹಣೆ ನೆರವಿಗೆ ಪ್ರಧಾನಿ ಜೊತೆ ಸಿಎಂ ಎಚ್‍ಡಿಕೆ ಚರ್ಚೆ

Public TV
2 Min Read
modi hdk

ನವದೆಹಲಿ: ಮೇಕೆದಾಟು ವಿಚಾರವಾಗಿ ರಾಜ್ಯದ ಸಂಸದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವ ತಮಿಳುನಾಡು ನಡೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಒತ್ತಡಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಮೂಲಕ ಒತ್ತಾಯಿಸಿದ್ದಾರೆ.

ಇತ್ತ ಸಿಎಂ ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿ ಕುರಿತು ಪ್ರಧಾನಿ ಮೋದಿ ಮತ್ತು ಕೇಂದ್ರದ ಸಚಿವರ ಜೊತೆ ಗಹನ ಚರ್ಚೆ ನಡೆಸಿದ್ದಾರೆ. ಪ್ರಧಾನಿಗಳ ಭೇಟಿ ಬಳಿಕ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದ ಹಲವಾರು ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಮುಂದಿದ್ದು, ಅವುಗಳ ಒಪ್ಪಿಗೆ ಪಡೆಯಲು ದೆಹಲಿಗೆ ಬಂದಿದ್ದೆ. ಇದರ ಭಾಗವಾಗಿ ಸಚಿವರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುರೇಶ್ ಪ್ರಭು, ಪಿಯೂಷ್ ಗೋಯಲ್ ಭೇಟಿಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು ತಿಳಿಸಿದರು.

ಪ್ರಮುಖವಾಗಿ ರಾಜ್ಯದ ಮಹತ್ವದ ಯೋಜನೆಯಾದ ಮೇಕೆದಾಟು ಡಿಪಿಆರ್ ಗೆ ಅನುಮತಿ ನೀಡಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದು, ಮಹದಾಯಿ ನ್ಯಾಯಾಧೀಕರಣ ತೀರ್ಪು ಅನುಷ್ಠಾನದ ಕಾನೂನು ತೊಡಕಿನ ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಯೋಜನೆಯನ್ನಾಗಿ ಕೃಷ್ಣಾ ಮೇಲ್ದಂಡೆ ಘೋಷಿಸಿ, ಬೃಹತ್ ಯೋಜನೆ ರಾಜ್ಯವೊಂದೇ ಏಕಾಂಗಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ಅಲ್ಲದೇ ರಾಜ್ಯದಲ್ಲಿ ತೀವ್ರವಾಗಿರುವ ಬರ ಪರಿಸ್ಥಿತಿಯಿಂದ ಸುಮಾರು 20 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಹಾಗೂ ನರೇಗಾ ಯೋಜನೆಯಡಿ ಬಾಕಿ ಇರುವ 935 ಕೋಟಿ ರೂ. ಬಾಕಿ ಬಿಡುಗಡೆಗೆ ಮನವಿ ಮಾಡಿದರು.

ಇದಕ್ಕೂ ಮುನ್ನ ವಿತ್ತ ಸಚಿವ ಜೇಟ್ಲಿ ಅವರನ್ನು ಭೇಟಿಯಾಗಿ, ಜಿಎಸ್‍ಟಿ ಬಗ್ಗೆ ಚರ್ಚಿಸಿದರು. ಜಿಎಸ್‍ಟಿ ಜಾರಿಯಿಂದ ರಾಜ್ಯಕ್ಕೆ ಆಗುತ್ತಿರುವ ಕೊರತೆ ಬಗ್ಗೆ ಕಳವಳ ತೋಡಿಕೊಂಡಿದ್ದು, ಜಿಎಸ್‍ಟಿ ಅನುಷ್ಠಾನದಲ್ಲಿ ಪರೋಕ್ಷ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ. ತೆರಿಗೆ ಸಂಗ್ರಹದಲ್ಲಿ ಶೇ.20 ರಷ್ಟು ಕೊರತೆಯಾಗಿದೆ. ಇದರಿಂದ ರಾಜ್ಯದ ಯೋಜನೆಗಳಿಗೆ ಹಣವೂ ಕೊರತೆ ಇದೆ. ಆದ್ದರಿಂದ ಜಿಎಸ್‍ಟಿ ಪರಿಹಾರದ ಅನುದಾನದ ನೆರವನ್ನು 2022 ರಿಂದ 2025 ಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ರಾಯಚೂರಿನ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಶೀಘ್ರ ಕಲ್ಲಿದ್ದಲು ಘಟಕ ಹಂಚಿಕೆಗೆ ಮನವಿ ಮಾಡಿದ್ದು, ಬೀದರ್‍ನಿಂದ ನಾಂದೇಡ್‍ಗೆ ರೈಲ್ವೆ ಸಂಪರ್ಕ ಮತ್ತು ಬೆಂಗಳೂರಿನ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಬಜೆಟ್‍ನಲ್ಲಿ ಪೂರ್ಣ ಅನುದಾನ ನೀಡುವಂತೆ ಮನವಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article