ಆರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಯಾಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ. ಈಗಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಲ್ಲ. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಕೆಲವರಿಗೆ ಆಗೋದಿಲ್ಲ.
ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಆರೋಗ್ಯವಾಗಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕು. ಪೌಷ್ಠಿಕ ಆಹಾರದ ಜೊತೆಗೆ ಆರೋಗ್ಯಕ್ಕೆ ಹಿತವಾದ ಕಷಾಯಗಳನ್ನು ದಿನನಿತ್ಯ ಕುಡಿದರೆ ಸುಲಭವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
Advertisement
Advertisement
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೆಲವು ಕಷಾಯಗಳನ್ನು ಸೇವಿಸಿದರೆ ಅದು ದೇಹದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡಿ ಆರೋಗ್ಯ ಕಾಪಾಡುತ್ತದೆ.
Advertisement
Advertisement
ಆರೋಗ್ಯಕರ ಕಷಾಯಗಳು ಯಾವುದು?
1. ಅರಿಶಿಣ ಮತ್ತು ಹಾಲು ಕಷಾಯ
ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಶಿಣ ಮಿಶ್ರಿತ ಹಾಲು ಕುಡಿದರೆ ಕೆಮ್ಮು, ಗಂಟಲು ಕೆರೆತ ಕಡಿಮೆ ಆಗುತ್ತದೆ. ಬೇಕಾದರೆ ರುಚಿಗೆ ಹಾಲಿಗೆ ಅರಿಶಿಣ ಜೊತೆಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬಹುದು.
2. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯ
ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಏಲಕ್ಕಿ, ಮತ್ತು ಕಾಳು ಮೆಣಸು ಮಿತವಾಗಿ ಬಳಸಬೇಕು. ಯಾಕೆಂದರೆ ತುಂಬಾ ಬಳಸಿದರೆ ಉಷ್ಣವಾಗುತ್ತದೆ. ನೀರಿಗೆ ಕಾಳುಮೆಣಸು(ಪುಡಿ ಮಾಡಿದ್ದು), ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ.
3. ತುಳಸಿ ಮತ್ತು ಕಾಳು ಮೆಣಸಿನ ಕಷಾಯ
ತುಳಸಿ ದೇಹದ ಆರೋಗ್ಯವನ್ನು ಕಾಡುವುವಲ್ಲಿ ಪರಿಣಾಮಕಾರಿಯಗಿದ್ದು, ತುಳಿಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಎರಡು ಲೋಟ ನೀರಿಗೆ ಹಾಕಿ, ಅದು ಅರ್ಧ ಲೋಟದಷ್ಟು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. 2 ಲೀಟರ್ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ, ಈ ಕಷಾವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
4. ಅಶ್ವಗಂಧ ಕಷಾಯ ಮತ್ತು ಅಣಬೆ ಸೂಪ್
ಅಶ್ವಗಂಧದಲ್ಲಿ ರೋಗ ನಿರೋಧಕ ಗುಣ ಅಡಕವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಕಷಾಯ ಕುಡಿದರೆ ಒಳ್ಳೆದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಚೆನ್ನಾಗಿರುತ್ತದೆ.
5. ಪುದೀನಾ ಮತ್ತು ರೋಸ್‍ಮೆರಿ ಕಷಾಯ
ಪುದೀನಾದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಅಂಶವಿದೆ. ಪುದೀನಾ ಮತ್ತು ರೋಸ್‍ಮೆರಿ ಎರಡನ್ನು ಮಿಶ್ರಣ ಮಾಡಿದ ಕಷಾಯ ಸೇವನೆಯಿಂದ ಹವಾಮಾನ ಬದಲಾವಣೆಯಿಂದ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಬಹುದು.