ಬೆಂಗಳೂರು: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿರುವ ಘಟನೆ ಬನ್ನೇರುಘಟ್ಟ ಬಳಿಯ ಭೂತನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಣಸವಾಡಿ ನಿವಾಸಿ ವಿಜಯಕುಮಾರ್ (29) ಕೊಲೆಯಾದ ವ್ಯಕ್ತಿ. ರುದ್ರೇಶ್ ಕೊಲೆ ಮಾಡಿದ ಆರೋಪಿ. ಐದು ದಿನಗಳ ಹಿಂದೆಯೇ ವಿಜಯ ಕುಮಾರ್ ಕಾಣೆಯಾಗಿರುವ ಕುರಿತು ಆತನ ಕುಟುಂಬದವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ನಡೆದದ್ದು ಏನು?: ರುದ್ರೇಶ್ ಹಾಗೂ ವಿಜಯ ಕುಮಾರ್ ಇಬ್ಬರು ಸಂಬಂಧಿಕರು, ಜೊತೆಗೆ ಸ್ನೇಹಿತರೂ ಆಗಿದ್ದರು. ಆದರೆ ರುದ್ರೇಶ್ ಪತ್ನಿಯೊಂದಿಗೆ ವಿಜಯಕುಮಾರ್ ಅನೈತಿಕ ಸಂಬಂಧ ಹೊಂದಿದ್ದನು. ವಿಷಯ ಗೊತ್ತಾಗುತ್ತಿದ್ದಂತೆ ರುದ್ರೇಶ್ ಈ ಮೊದಲು ವಿಜಯ ಕುಮಾರ್ ಕೊಲೆಗೆ ಯತ್ನಿಸಿ ವಿಫಲನಾಗಿದ್ದ. ಆದರೆ ಇತ್ತೀಚೆಗೆ ಆರೋಪಿ ರುದ್ರೇಶ್ ವಿಜಯ ಕುಮಾರ್ ಗೆ ಮದ್ಯ ಕುಡಿಸಿ, ನಗರದಲ್ಲಿಯೇ ಕೊಲೆ ಮಾಡಿ, ಬಳಿಕ ಮೃತದೇಹವನ್ನು ಬನ್ನೇರುಘಟ್ಟ ಬಳಿಯ ಭೂತನಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೊತ್ತು ತಂದಿದ್ದ. ನಿರ್ಜನ ಪ್ರದೇಶದಲ್ಲಿ ದೇಹವನ್ನು ಹಾಕಿ ಪೆಟ್ರೋಲ್ ಸುರಿದು ಸುಟ್ಟು ಪರಾರಿಯಾಗಿದ್ದನು.
ವಿಜಯ ಕುಮಾರ್ ಕಾಣೆಯಾಗಿರುವ ಕುರಿತು ಆತನ ಕುಟುಂಬ ನೀಡಿದ್ದ ದೂರು ಪಡೆದ ಬಾಣಸವಾಡಿ ಠಾಣೆ ಪೊಲೀಸರು ತನಿಖೆ ಚುರುಗೊಳಿಸಿದ್ದರು. ವಿಜಯ ಕುಮಾರ್ ಮೊಬೈಲ್ ನಂಬರ್ ಟ್ರ್ಯಾಪ್ ಮಾಡಿದಾಗ ರುದ್ರೇಶ್ ಬಳಿ ಇರುವ ಮಾಹಿತಿ ಸಿಕ್ಕಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ವಿಜಯ ಕುಮಾರ್ ಮೃತದೇಹ ಪತ್ತೆಗಾಗಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದಾಗ ದೇಹ ಗುರುತು ಸಿಗದ ಸ್ಥಿತಿಯಲ್ಲಿ ಸುಟ್ಟುಬಿದ್ದಿತ್ತು. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.