ಬಿಸಿಲನಾಡು ರಾಯಚೂರಲ್ಲಿ ವಲಸೆ ಪಕ್ಷಿಗಳ ಕಲರವ

Public TV
2 Min Read
RCR 9 10 18 VALASE BIRDS 6

ರಾಯಚೂರು: ಬಿಸಿಲನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಈಗ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಇಲ್ಲಿನ ಮರ್ಚಡ್, ಮನ್ಸಲಾಪುರ ಸೇರಿದಂತೆ ಕೆಲವು ಕೆರೆಗಳಿಗೆ ಸಾವಿರಾರು ಪಕ್ಷಿಗಳ ದಂಡು ವಲಸೆ ಬಂದಿದ್ದು, ಅವುಗಳ ಹಾರಾಟ ಆಕಾಶಕ್ಕೆ ಆಭರಣ ಮುಡಿಸುವಂತಿದೆ.

ಆಹಾರ ಅರಸಿ ವಿವಿಧ ಜಾತಿಯ ಪಕ್ಷಿಗಳು ಉತ್ತರ ಭಾರತ ಸೇರಿದಂತೆ ವಿದೇಶಗಳಿಂದ ಇಲ್ಲಿಗೆ ಬಂದಿವೆ. ಬಣ್ಣಬಣ್ಣದ ವಿಭಿನ್ನ ಪಕ್ಷಿಗಳ ಆಗಮನ ಪಕ್ಷಿ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಸೈನಿಕರಂತೆ ಸಾಲು ಸಾಲಾಗಿ ಹೋಗುವ ಪಕ್ಷಿಗಳು, ತುಂಬಿದ ಕೆರೆಯಲ್ಲಿ ಪುಟ್ಟ ಪುಟ್ಟದಾಗಿ ಕಾಣಸಿಗುವ ಬಾತುಕೋಳಿಗಳು ಪಕ್ಷಿ ಪ್ರೇಮಿಗಳಿಗೆ ಮನರಂಜನೆ ನೀಡುತ್ತಿವೆ.

ಇಲ್ಲಿಗೆ ಬಂದಿರುವ ಪಕ್ಷಿಗಳು ಪ್ರತಿ ವರ್ಷ ಕೆಲ ಕಾಲ ವಿಶ್ರಾಂತಿ ಪಡೆದು, ಮತ್ತೆ ಇಲ್ಲಿಂದ ಹೊರಡುತ್ತಿದ್ದವು. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲೂ ಇಲ್ಲಿಯೇ ಉಳಿದುಕೊಂಡಿದ್ದು, ಪ್ರವಾಸಿಗರಿಗೆ ಸಂತಸ ತಂದಿದೆ. ಉತ್ತರ ಭಾರತ ಹಾಗೂ ಮಂಗೋಲಿಯಾದಂತಹ ಚಳಿನಾಡಿನಿಂದ ಪಕ್ಷಿಗಳು ವಲಸೆ ಬಂದಿವೆ.

RCR 9 10 18 VALASE BIRDS 7

ಯಾವ ಪಕ್ಷಿಗಳನ್ನು ಕಾಣಬಹುದು?
ಪೆರಿಗ್ರಿನ್ ಫಾಲ್ಕನ್, ಗ್ರೇಟರ್ ಫ್ಲೆಮಿಂಗ್, ಹ್ಯಾರಿಯರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪೂನ್ ಬಿಲ್ಸ್, ರಾಜ ಹಂಸ, ಬಣ್ಣದ ಕೊಕ್ಕರೆ ಸೇರಿದಂತೆ ಹಲವಾರು ಜಾತಿಯ ಪಕ್ಷಿಗಳನ್ನು ಮರ್ಚಡ್ ಹಾಗೂ ಮನ್ಸಲಾಪುರ ಕೆರೆಯಲ್ಲಿ ನೋಡಿ ಆನಂದಿಸಬಹುದಾಗಿದೆ. ಪಕ್ಷಿಗಳ ವೀಕ್ಷಣೆಗಾಗಿ ರಾಜ್ಯದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಉಷ್ಣಪ್ರದೇಶವಾದ ದಕ್ಷಿಣ ಭಾರತಕ್ಕೆ ಪಕ್ಷಿಗಳು ಆಹಾರ, ವಿಶ್ರಾಂತಿ ಹಾಗೂ ಸಂತಾನಭಿವೃದ್ಧಿಗಾಗಿ ವಲಸೆ ಬರುತ್ತವೆ. ಇಲ್ಲಿಗೆ ಬರುವ ಪಕ್ಷಿಗಳಿಗೆ ರಾಯಚೂರಿನ ಮರ್ಚಡ್ ಕೆರೆ, ಮಾವಿನ ಕೆರೆ, ಮನ್ಸಲಾಪುರ ಕೆರೆ, ಮಲಿಯಾಬಾದ್ ಕೆರೆಗಳು ಹೇಳಿ ಮಾಡಿಸಿದಂತಿವೆ. ಈ ಪ್ರದೇಶದಲ್ಲಿ ಪಕ್ಷಿಗಳು ಕೇವಲ ವಿಶ್ರಾಂತಿ ಪಡೆದು, ಮುಂದೆ ರಾಮೇಶ್ವರದಲ್ಲಿ ಸಂತಾನಭಿವೃದ್ಧಿ ಮಾಡುತ್ತವೆ. ಆದರೆ ಮಾರ್ಚ್ ತಿಂಗಳಲ್ಲಿಯೇ ಇಲ್ಲಿಂದ ಹೊರಡುತ್ತಿದ್ದ ಪಕ್ಷಿಗಳು, ಇನ್ನೂ ಇಲ್ಲಿಯೇ ಉಳಿದುಕೊಂಡಿರೋದು ನಮಗೆ ಸಂತಸ ತಂದಿದೆ ಎಂದು ಪಕ್ಷಿ ಪ್ರೇಮಿಗಳು ಹೇಳುತ್ತಾರೆ.

RCR 9 10 18 VALASE BIRDS 5

ವಲಸೆ ಪಕ್ಷಿಗಳ ಮಹತ್ವ ತಿಳಿಯದ ಕೆಲ ದುಷ್ಕರ್ಮಿಗಳು ಇವುಗಳನ್ನು ಬೇಟೆಯಾಡಿ ತಿನ್ನುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪಕ್ಷಿ ಪ್ರೇಮಿಗಳು ಒತ್ತಾಯಿಸಿದ್ದಾರೆ. ನಗರ ಪ್ರದೇಶದಿಂದ ಮರ್ಚಡ್ ಹಾಗೂ ಮನ್ಸಲಾಪುರ ಕೆರೆಗಳು ದೂರವಿದ್ದು, ಇಲ್ಲಿ ಮನುಷ್ಯರ ಓಡಾಟ ಸ್ವಲ್ಪ ಕಡಿಮೆಯಿದೆ. ಈ ಎರಡೂ ಕೆರೆಯಲ್ಲಿ ಹೆಚ್ಚು ಆಳವಲ್ಲದ, ಸದಾ ತಳಮಟ್ಟದ ನೀರು ಇರುವುದರಿಂದ ಪಕ್ಷಿಗಳಿಗೆ ಸುಲಭವಾಗಿ ಆಹಾರ ಸಿಗುತ್ತದೆ. ಹೀಗಾಗಿ ರಾಯಚೂರಿನ ಈ ಕೆರೆಗಳನ್ನು ಪಕ್ಷಿಧಾಮ ಮಾಡಬೇಕು ಎನ್ನುವುದು ಪಕ್ಷಿ ತಜ್ಞರು ಹಾಗೂ ಪಕ್ಷಿ ಪ್ರೇಮಿಗಳ ಅಭಿಪ್ರಾಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *