ಚಾಮರಾಜನಗರ: ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಅಮಾಯಕ ಭಕ್ತರ ಸಾವಿಗೆ ಕಾರಣನಾಗಿರುವ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸುಪ್ರಿಂ ಕೋರ್ಟಿಗೆ ಇಮ್ಮಡಿ ಮಹದೇವಸ್ವಾಮಿ ದುವಾ ಅಸೋಸಿಯೆಟ್ ಮೂಲಕ ನವೆಂಬರ್ 5ರಂದು ಅರ್ಜಿ ಸಲ್ಲಿಸಲಾಗಿತ್ತು. ನವೆಂಬರ್ 21 ರಂದು ಅರ್ಜಿ ಸ್ವೀಕರಿಸಿದ್ದ ನ್ಯಾಯಾಧೀಶರಾದ ಅಜಯ್ ರಸ್ಟೋಗಿ, ಎನ್ ವಿ. ರಮಣ ಮತ್ತು ವಿ.ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಸುದೀರ್ಘ ವಿಚಾರಣೆ ನಡೆಸಿ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.
ಡಿಸೆಂಬರ್ 14, 2018ರಂದು ಕಿಚ್‍ಗುತ್ ಮಾರಮ್ಮ ದೇಗುಲಕ್ಕೆ ಗೋಪುರ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಭಕ್ತರಿಗೆ ನೀಡಿದ ಪ್ರಸಾದಕ್ಕೆ ವಿಷ ಸೇರಿಸಲಾಗಿತ್ತು. ವಿಷ ಮಿಶ್ರಿತ ಆಹಾರ ಸೇವಿಸಿದ್ದ ಭಕ್ತರಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದನು.
ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಇನ್ನಿಲ್ಲದ ಹರಸಾಹಸ ಮಾಡಿದ್ದನು. ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಪರ ವಕಾಲತ್ತು ವಹಿಸಲು ಸ್ಥಳೀಯವಾಗಿ ಯಾವುದೇ ವಕೀಲರು ಮುಂದೆ ಬಾರದ ಕಾರಣ, ಜಾಮೀನು ಅರ್ಜಿ ವಜಾಗೊಂಡು ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಇಮ್ಮಡಿ ಮಹದೇವಸ್ವಾಮಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಮೂಲಕ ಹೊರ ಬಂದಲ್ಲಿ ಪ್ರಕರಣದ ಸಾಕ್ಷಿಗಳನ್ನ ನಾಶ ಪಡಿಸುವ ಸಂಭವವಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು.