– ಜಗತ್ತಿನಾದ್ಯಂತ ಟಿ20 ನೇರಪ್ರಸಾರ ಸ್ಥಗಿತ
– ಒಪ್ಪಂದವನ್ನು ರದ್ದುಗೊಳಿಸಿದ ಐಎಂಜಿ ರಿಲಯನ್ಸ್
– ಭಾರತದಲ್ಲೂ ಕ್ರಿಕೆಟ್ ನೇರಪ್ರಸಾರವಿಲ್ಲ
ನವದೆಹಲಿ: ಪುಲ್ವಾಮ ದಾಳಿಯ ನಂತರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಹೊಡೆತ ನೀಡಿದ್ದರೆ ಈಗ ಭಾರತದ ಕಂಪನಿಗಳು ಅಲ್ಲಿ ಆಯೋಜನೆಗೊಂಡಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್) ಟಿ20 ಪಂದ್ಯಗಳನ್ನು ಬಹಿಷ್ಕಾರ ಹಾಕುವ ಮೂಲಕ ಭಾರೀ ಶಾಕ್ ನೀಡಿವೆ.
ಭಾರತದ ಸೈನಿಕರು ಹುತಾತ್ಮರಾದ ದಿನವಾದ ಗುರುವಾರ 4ನೇ ವರ್ಷದ ಪಿಎಸ್ಎಲ್ ಕ್ರಿಕೆಟ್ ಟೂರ್ನಿಗೆ ದುಬೈನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈಗ ಟೂರ್ನಿಯ ನಿರ್ಮಾಣ ಹಕ್ಕು ಪಡೆದಿದ್ದ ಐಎಂಜಿ- ರಿಲಯನ್ಸ್ ಸಂಸ್ಥೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಜೊತೆಗಿನ ಒಪ್ಪಂದವನ್ನೇ ರದ್ದು ಮಾಡಿದೆ.
Advertisement
Advertisement
ಭಾರತೀಯ ಸೈನಿಕರ ಮೇಲಿನ ದಾಳಿಯನ್ನು ಖಂಡಿಸಿ ಈ ಕೂಡಲೇ ಪ್ರಸಾರ ಸಂಬಂಧ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ ಎಂದು ಐಎಂಜಿ ರಿಲಯನ್ಸ್ ಪಿಸಿಬಿಗೆ ಮೇಲ್ ಕಳುಹಿಸಿದೆ. ಐಎಂಜಿ ರಿಲಯನ್ಸ್ ನೇರಪ್ರಸಾರಕ್ಕೆ ಸಂಬಂಧಿಸಿದ ಕ್ಯಾಮೆರಾ, ಮಾನವ ಸಂಪನ್ಮೂಲಗಳನ್ನು ಒದಗಿಸುತಿತ್ತು. ಈಗಾಗಲೇ ಭಾರೀ ನಷ್ಟದಲ್ಲಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಇದು ದೊಡ್ಡ ಹೊಡೆತ ನೀಡಿದ್ದು, ಕೋಟ್ಯಂತರ ರೂ. ನಷ್ಟವಾಗುವ ಸಾಧ್ಯತೆಯಿದೆ.
Advertisement
ಪಂದ್ಯ ನಡೆಯುತ್ತಿರುವ ವೇಳೆಯೇ ಒಪ್ಪಂದ ರದ್ದಾಗಿರುವ ಕಾರಣ ಪಿಸಿಬಿ ಈಗ ನೇರ ಪ್ರಸಾರ ಸಂಬಂಧ ಹೊಸ ನಿರ್ಮಾಣ ಕಂಪನಿಯನ್ನು ಹುಡುಕಬೇಕಿದೆ. ಡಿ ಸ್ಫೋರ್ಟ್ಸ್ ಈ ವರ್ಷದ ನಿರ್ಮಾಣ ಹಕ್ಕನ್ನು ಪಡೆದುಕೊಂಡಿದ್ದರೆ ಮೊದಲ ಮೂರು ವರ್ಷದ ನಿರ್ಮಾಣ ಹಕ್ಕನ್ನು ಇಂಗ್ಲೆಂಡ್ ಮೂಲದ ಸನ್ಸೆಟ್& ವಿನೆ ಕಂಪನಿ ಪಡೆದುಕೊಂಡಿತ್ತು.
Advertisement
ನೇರಪ್ರಸಾರವೇ ಇಲ್ಲ:
ಇದರ ಜೊತೆಯಲ್ಲಿ ಭಾರತದಲ್ಲಿ ಪಿಎಸ್ಎಲ್ ಪ್ರಸಾರದ ಹಕ್ಕು ಪಡೆದಿದ್ದ ಡಿ ಸ್ಫೋರ್ಟ್ಸ್ ನೇರ ಪ್ರಸಾರ ಮಾಡದೇ ಇರಲು ನಿರ್ಧರಿಸಿದೆ. ಭಾನುವಾರ ರಾತ್ರಿ ದುಬೈಯಲ್ಲಿ ಕ್ರಿಕೆಟ್ ನಡೆಯುತ್ತಿದ್ದರೆ ಡಿ ಸ್ಫೋರ್ಟ್ಸ್ ನಲ್ಲಿ ಬೇರೆ ಕಾರ್ಯಕ್ರಮಗಳು ಪ್ರಸಾರವಾಗಿತ್ತು.
ಲೈವ್ ಸ್ಕೋರ್ ಬರಲ್ಲ:
ಪಿಎಸ್ಎಲ್ ಟೂರ್ನಿಯ ಲೈವ್ ಸ್ಕೋರ್ ಗೆ ಕ್ರಿಕೆಟ್ ಬಝ್ ಬಹಿಷ್ಕಾರ ಹಾಕಿದೆ. ಪ್ರತಿ ಎಸೆತ, ವಿವರಣೆ ಸುದ್ದಿಯನ್ನು ಕ್ರಿಕ್ ಬಝ್ ಅಪ್ಡೇಟ್ ಮಾಡುತಿತ್ತು. ಅಪ್ಡೇಟ್ ಗಳಿಗೆ ಬ್ರೇಕ್ ಹಾಕಿದ ಜೊತೆ ಈ ಹಿಂದಿನ ಸ್ಕೋರ್ ಮಾಹಿತಿ, ಸುದ್ದಿಗಳನ್ನು ತನ್ನ ವೆಬ್ಸೈಟ್ ನಿಂದಲೇ ಕಿತ್ತೆಸೆದಿದೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಉಳಿದ ರಾಷ್ಟ್ರಗಳು ಪಾಕಿಗೆ ಬಾರದ ಕಾರಣ ಪಿಸಿಬಿ ಕ್ರಿಕೆಟ್ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುತ್ತಿದೆ. ನಷ್ಟದಲ್ಲಿರುವ ಪಿಸಿಬಿ ಮತ್ತೆ ಟೂರ್ನಿ ಆಯೋಜಿಸಲು ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಈಗ ಪುಲ್ವಾಮ ದಾಳಿಯಿಂದ ಮತ್ತೆ ಪಿಸಿಬಿಗೆ ಭಾರೀ ಹೊಡೆತ ಬಿದ್ದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv