ಬೆಂಗಳೂರು: ಮುಂಗಾರು ಮಳೆ ಇಂದು ಕೇರಳಕ್ಕೆ ಎಂಟ್ರಿ ಕೊಡುತ್ತಿದೆ. ಈ ಹೊತ್ತಲ್ಲೇ ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕೇರಳದಲ್ಲಿ ಜೂನ್ 10ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕೊಲ್ಲಂ, ಅಲಪ್ಪುಜಾ, ಎರ್ನಾಕುಳಂ, ತಿರುವನಂತಪುರಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಕೇರಳಕ್ಕೆ ಮುಂಗಾರು ಪ್ರವೇಶದಿಂದ ರಾಜ್ಯದಲ್ಲೂ ಭಾರೀ ಮಳೆಯಾಗಲಿದೆ. ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರಿನಲ್ಲಿ ಮಳೆ ಆಗುತ್ತಿದೆ. ನಾಳೆ ಹಾಗೂ ನಾಡಿದ್ದು ಕೂಡ ಭಾರೀ ವರ್ಷಧಾರೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.
ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಎಂಟ್ರಿಗೆ ಕೆಲ ದಿನಗಳಷ್ಟೇ ಬಾಕಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರ ಪ್ರವಾಸ ಅಧ್ಯಯನಕ್ಕೆ ಇಂದು ಎರಡನೇ ದಿನ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.