ಬೆಂಗಳೂರು: ಐಎಂಎ ಬಹುಕೋಟಿ ಹಗರಣದ ಕುರಿತು ಇಂದು ಎಸ್‍ಐಟಿ ಪೊಲೀಸರು ತನಿಖೆ ಆರಂಭಿಸಿದ್ದು, ಇತ್ತ ಹಗರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ತಾಹೀರ್ ಎಂಬವರು ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಮೊಹಮ್ಮದ್ ತಹೀರ್ ಅವರು ಮನ್ಸೂರ್ ಹಾಗೂ ಸರ್ಕಾರ, ಉತ್ತರ ವಿಭಾಗದ ಎಸಿ ಅವರನ್ನು ಪಾರ್ಟಿ ಮಾಡಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸರ್ಕಾರ ಮನ್ಸೂರ್ ಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸೀಜ್ ಮಾಡುತ್ತಿದೆ. ಈ ವೇಳೆ ಸಾಕಷ್ಟು ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗುತ್ತದೆ. ಈ ಸಂದರ್ಭದವನ್ನು ಕೆಲ ಸ್ವಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಸೀಜ್ ಮಾಡುವ ವಸ್ತುಗಳನ್ನು ಸಾಗಿಸುವ ಮಾರ್ಗದಲ್ಲೇ ನಾಪತ್ತೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಮನ್ಸೂರ್ ಅವರ ಆಸ್ತಿಗಳನ್ನು ಜಪ್ತಿ ಮಾಡುವ ವೇಳೆ ಎಲ್ಲಾ ವಸ್ತುಗಳನ್ನು ಕ್ಯಾಮೆರಾ ಕಣ್ಗಾವಲಿನಲ್ಲಿ ಸೀಜ್ ಮಾಡಬೇಕು. ಅಲ್ಲದೇ ಸೀಜ್ ಮಾಡುವ ಪ್ರತಿಯೊಂದು ವಸ್ತುವಿನ ಬಗ್ಗೆ ಕೆಪಿಐಡಿಎಫ್‍ಇ 2004 ರಂತೆ ವಿವರ ದಾಖಲಿಸಬೇಕು ಎಂದು ಉತ್ತರ ವಿಭಾಗದ ಎಸಿ ಹಾಗೂ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ತಾಹೀರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇತ್ತ ಇಂದು ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿರುವ ಎಸ್‍ಐಟಿ ತಂಡ ಶಾಂತಿನಗರದಲ್ಲಿ ಇರುವ ಐಎಂಎ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದೆ. ಇತ್ತ ಮನ್ಸೂರ್ ಕಾರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮನ್ಸೂರ್ ವಿದೇಶಕ್ಕೆ ತೆರಳಿರುವ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಿದ್ದಾರೆ.