ಬೆಂಗಳೂರು: ಐಎಂಎ ಹಗರಣದ ಸಂಬಂಧ ಸಂಪೂರ್ಣ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಬುಲಾವ್ ನೀಡಿದ್ದಾರೆ.
ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಅವರಿಗೆ ವಿಧಾನ ಪರಿಷತ್ ಸದಸ್ಯರುಗಳಾದ ನಜೀರ್ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ನೀಡಿದರು. ಈ ಮೂಲಕ ಐಎಂಎ ಹಗರಣ ಹಾಗೂ ಇದರಲ್ಲಿ ಮಾಜಿ ಸಚಿವ ರೋಷನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಪಕ್ಷಕ್ಕೆ ಮುಜುಗರ ಆಗುವ ಸಂಭವ ಇದ್ದರೆ ಎಸ್‍ಐಟಿ ವಿಚಾರಣೆಗೆ ಮೊದಲೇ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು, ಸಚಿವ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ರೋಷನ್ ಬೇಗ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೆ ಮಾಜಿ ಸಚಿವರು ಮಾತ್ರ ನೋಟಿಸ್‍ಗೆ ಉತ್ತರಿಸಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ದಿನೇಶ್ ಗುಂಡೂರಾವ್ ಅವರ ಭೇಟಿಯ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ಐಎಂಎ ಹಗರಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಇದುವರೆಗೂ ನಡೆದ ತನಿಖೆಯ ಕುರಿತು ಮಾಹಿತಿ ನೀಡಿದ್ದೇನೆ. ಇದರಲ್ಲಿ ರೋಷನ್ ಬೇಗ್ ಅವರ ಪಾತ್ರವಿದೆ ಎನ್ನುವುಕ್ಕೆ ಸೂಕ್ತ ದಾಖಲೆಗಳು ಬೇಕು. ಆಡಿಯೋದಲ್ಲಿ ಮಾಜಿ ಸಚಿವ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನು ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಮನ್ಸೂರ್ ಧ್ವನಿ ಎನ್ನುವುದು ಸಾಬೀತಾದರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದು ಹೇಳಿದರು.
ಐಎಂಎ ಹಗರಣದ ಸಂಬಂಧ ಜಮೀರ್ ಅಹ್ಮದ್ ಖಾನ್ ಅವರನ್ನು ಬಂಧಿಸಬೇಕು ಎಂಬ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು. ದಾಖಲೆಗಳು ಇದ್ದರೆ ಮಾತನಾಡಬೇಕು. ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ದಾಖಲೆ ಕೊಟ್ಟರೆ ಅವರು ಏನು ಹೇಳುತ್ತಾರೋ ಅದನ್ನು ಕೇಳುತ್ತೇನೆ ಎಂದು ತಿಳಿಸಿದರು.
ಜಮೀರ್ ಮೃಧು ಧೋರಣೆ ತಾಳಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಎಸ್‍ಐಟಿ ತನಿಖೆ ನಡೆಯುತ್ತಿದೆ. ನಾನೇನು ತನಿಖೆಯಲ್ಲಿ ಹೋಗಿ ಕುಳಿತುಕೊಳ್ಳುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ನಮ್ಮ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಒಂದು ವೇಳೆ ಪ್ರಕರಣ ಭೇದಿಸಲು ಸಾಧ್ಯವಾಗದಿದ್ದರೆ ನೋಡೋಣ ಎಂದು ಹೇಳುವ ಮೂಲಕ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಸುಳಿವು ಬಿಚ್ಚಿಟ್ಟರು.