ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಎಸ್‍ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಸುಮಾರು ಆರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.
ಸಿಐಡಿ ಕಚೇರಿಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಹಾಜರಾಗಿದ್ದು, ಎಸ್‍ಐಟಿ ಮುಖ್ಯಸ್ಥ ರವಿಕಾಂತೇಗೌಡ ಹಾಗೂ ಡಿಸಿಪಿ ಗಿರೀಶ್ ಅವರು ಜಮೀರ್ ಅಹ್ಮದ್ ಅವರನ್ನು ಸುಮಾರು ಆರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಸಂಜೆ ಆರು ಗಂಟೆಯಾದರೂ ಸಹ ಇನ್ನೂ ಬಿಟ್ಟಿಲ್ಲ.
Advertisement
Advertisement
ನನಗೆ ಮನ್ಸೂರ್ ಖಾನ್ ಯಾರು ಎಂಬುದೇ ಗೊತ್ತಿರಲಿಲ್ಲ. ಕಾರ್ಪೋರೇಟರ್ ಮುಜಾಹೀದ್ ಆತನನ್ನು ಪರಿಚಯಿಸಿದ್ದ. ನಿವೇಶನ ಮಾರಾಟ ಮಾಡುವಂತೆ ಡೀಲ್ ತಂದಿದ್ದೇ ಮುಜಾಹೀದ್. ಜಮೀನು ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿ ಮಾರಾಟ ಮಾಡಿಸಿದ್ದ. ಐಎಂಎ ಹಣ ನನ್ನ ಬಳಿ ಇಲ್ಲ, ನಾನು ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿಲ್ಲ ಎಂದು ವಿಚಾರಣೆ ವೇಳೆ ವಿವರಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ಸೈಟ್ ಮಾರಾಟದ ವ್ಯವಹಾರ ಹೊರತುಪಡಿಸಿದರೆ ಬೇರೆ ಯಾವುದೇ ವ್ಯವಹಾರವನ್ನು ಮನ್ಸೂರ್ ಖಾನ್ ಜೊತೆ ನಾನು ಮಾಡಿಲ್ಲ ಎಂದು ಎಸ್‍ಐಟಿ ಪೊಲೀಸರ ಮುಂದೆ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
Advertisement
ಕಾಲಾವಕಾಶ ನೀಡಿ: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ರೋಷನ್ ಬೇಗ್ ಇಬ್ಬರಿಗೂ ಸಹ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಜಮೀರ್ ಅಹ್ಮದ್ ಖಾನ್ ಹಾಜರಾಗಿದ್ದು, ರೋಷನ್ ಬೇಗ್ ಮತ್ತೆ ಒಂದು ವಾರ ಕಾಲಾವಕಾಶ ಕೇಳಿದ್ದಾರೆ.
ಈವರೆಗೆ ಎಸ್‍ಐಟಿ ಅಧಿಕಾರಿಗಳು 4 ಬಾರಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಈ ಹಿಂದೆ ಏರ್‍ಪೋರ್ಟ್ ನಲ್ಲಿ ವಶಕ್ಕೆ ಪಡೆಯಲಾಗಿತ್ತು. ಇಂದು ಸಹ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಪೊಲೀಸರು ನೋಟಿಸ್ ನೀಡಿದ್ದರು. ಇದೀಗ ಮತ್ತೆ ಒಂದು ವಾರ ಕಾಲಾವಕಾಶ ನೀಡುವಂತೆ ರೋಷನ್ ಬೇಗ್ ಕೇಳಿಕೊಂಡಿದ್ದಾರೆ. ಕಾಲಾವಕಾಶ ಕೊಡುವ ಬಗ್ಗೆ ಎಸ್‍ಐಟಿ ಅಧಿಕಾರಿಗಳು ಈವರೆಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.