– ಐಎಂಎ ಮಾಲೀಕ 4 ದಿನ ಇಡಿ ವಶಕ್ಕೆ
ಬೆಂಗಳೂರು: ಬಹುಕೋಟಿ ವಂಚಕ ಐಎಂಎ ಮಾಲೀಕ ಮನ್ಸೂರ್ ಖಾನ್ ಕೋರ್ಟಿನ ಕಟಕಟೆಯಲ್ಲಿರುವ ಹಿನ್ನೆಲೆಯಲ್ಲಿ 1ನೇ ಸಿಸಿಎಚ್ ಕೋರ್ಟ್ ಮುಂದೆ ಜನರು ಕಿಕ್ಕಿರಿದು ಸೇರಿದ್ದಾರೆ.
ಇಂದು ಬೆಳಗ್ಗೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದೆಹಲಿಯಿಂದ ಮನ್ಸೂರ್ ಖಾನ್ ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇಂದು ಕೋರ್ಟ್ ಮುಂದೆ ಹಾಜರು ಪಡಿಸಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆದಿದೆ. ಇದೇ ವೇಳೆ ಪೊಲೀಸರು ನಮ್ಮ ವಶಕ್ಕೆ ಕೊಡಿ ಎನ್ನುತ್ತಿದ್ದರು.
ಇನ್ನೊಂದೆಡೆ ಎಸ್‍ಐಟಿ ಅವರು ಕೂಡ ನಮ್ಮ ವಶಕ್ಕೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಮತ್ತೊಂದೆಡೆ ತೆಲಂಗಾಣ ಪೊಲೀಸರಿಂದಲೂ ನಮ್ಮ ವಶಕ್ಕೆ ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಕೊನೆಗೆ ವಿಚಾರಣೆ ಮಾಡಿ ನಾಲ್ಕು ದಿನಗಳವರೆಗೆ ಮನ್ಸೂರ್ ಖಾನ್‍ನನ್ನು ಇಡಿ ವಶಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿದೆ.
ಮನ್ಸೂರ್ ಖಾನ್ ಇಡಿ ಕಚೇರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಕಚೇರಿಗೆ ಹೂಡಿಕೆದಾರರು ಆಗಮಿಸುತ್ತಿದ್ದರು. ಮನ್ಸೂರ್ ಬಳಿ ಪ್ರಶ್ನೆ ಮಾಡಲು ರಸ್ತೆಯಲ್ಲಿ ಜನ ಕಾದುಕುಳಿತ್ತಿದ್ದರು. ಕೋರ್ಟ್ ಆವರಣದಲ್ಲಿ ಮೋಸಹೋದ ಜನರು ಕ್ಕಿಕ್ಕಿರಿದು ನಿಂತಿದ್ದರು. ಹೀಗಾಗಿ ಜನರು ಮನ್ಸೂರ್ ಖಾನ್ ಗೆ ಮುತ್ತಿಗೆ ಹಾಕಬಹುದೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತು ಒದಗಿಸಲಾಗಿತ್ತು.
ಮನ್ಸೂರ್ ಖಾನ್‍ನನ್ನು ಇಡಿ ಅಧಿಕಾರಿಗಳು ಶುಕ್ರವಾರ ರಾತ್ರಿ ದೆಹಲಿ ಕೋರ್ಟ್ ಎದುರು ಹಾಜರು ಪಡಿಸಲಾಗಿತ್ತು. ಇಂದು ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.