ಅಯೋಧ್ಯೆ (ಉತ್ತರ ಪ್ರದೇಶ): ಜ.22 ರಂದು ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದೆ. ಮಗನ ವಿಗ್ರಹ ಆಯ್ಕೆಯಾಗಿರುವುದಕ್ಕೆ ಯೋಗಿರಾಜ್ ತಾಯಿ ಸರಸ್ವತಿ ಸಂತಸ ವ್ಯಕ್ತಪಡಿಸಿದ್ದಾರೆ.
ನನಗೆ ತುಂಬಾ ಸಂತೋಷವಾಗಿದೆ. ಕಳೆದ ಆರು ತಿಂಗಳಿಂದ ಅವನು ಮಾಡಿದ ಕಾರ್ಯದ ಫಲ ಇದು. ಅವನ ತಂದೆ ಇದ್ದಿದ್ದರೆ, ಮಗನ ಕಲೆಯನ್ನು ಕಂಡು ಸಂತೋಷಪಡುತ್ತಿದ್ದರು ಎಂದು ಅರುಣ್ ಯೋಗಿರಾಜ್ ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣ
ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾ ವಿಗ್ರಹವನ್ನು ಅಯೋಧ್ಯೆಯ ಐತಿಹಾಸಿಕ ದೇವಾಲಯದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂಗಳವಾರ ತಿಳಿಸಿದೆ. ಜನವರಿ 22 ರಂದು ರಾಮಲಲ್ಲಾ ಅವರ ‘ಪ್ರಾಣ ಪ್ರತಿಷ್ಠೆ’ ಸಮಾರಂಭ ನಡೆಯಲಿದೆ.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣ ಶಿಲೆಯಲ್ಲಿ ಕೆತ್ತಿದ ಮೂರ್ತಿ ಭಗವಾನ್ ಶ್ರೀ ರಾಮಲಲ್ಲಾ, ಸರ್ಕಾರದ ವಿಗ್ರಹವಾಗಿ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಟ್ರಸ್ಟ್ ಆಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್ ರೈ
ಇದಕ್ಕೂ ಮೊದಲು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು, ಅರುಣ್ ಯೋಗಿರಾಜ್ ಅವರ ಕೆಲಸದ ಒಳನೋಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಿಗ್ರಹ ರಚನೆಯ ಸಮಯದಲ್ಲಿ ಶಿಲ್ಪಿಯ ಗಮನಾರ್ಹ ಏಕಾಗ್ರತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದರು.