ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಹೊಗಳಿದ್ದ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದು ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗುವ ಪ್ರಮೇಯವೇ ಇಲ್ಲ. ಈ ಬಗ್ಗೆ ನನಗೆ ಯಾವೊಬ್ಬ ನಾಯಕರು ಕೂಡ ಚರ್ಚೆ ಮಾಡಿಲ್ಲ ಎಂದು ಅವರು ತಿಳಿಸಿದರು.
ನಾನು ಬಿಜೆಪಿಯಲ್ಲಿ 5 ವರ್ಷ ಇದ್ದು ಬಂದಿದ್ದೇನೆ. ಅಲ್ಲಿಯ ನಾಯಕರು ಹೇಗೆ? ಏನು ಎನ್ನುವುದನ್ನು ನೋಡಿ ಬಂದಿದ್ದೇನೆ. 1974ರ ರೆಡ್ಡಿ ಕಾಂಗ್ರೆಸ್ ನಿಂದ ಇಲ್ಲಿಯವರೆಗೂ ಎಲ್ಲ ಪಕ್ಷದಲ್ಲೂ ನನ್ನ ಸ್ನೇಹಿತರಿದ್ದಾರೆ. ನಾವೆಲ್ಲ ಚರ್ಚೆಗಳನ್ನು ಮಾಡುತ್ತಲೇ ಇರುತ್ತೇವೆ. ಉಳಿದ ನಾಲ್ಕು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ಸೋಲಿಗೆ ಕಾರಣಗಳು ಏನು ಎನ್ನುವುದನ್ನು ತಿಳಿಯಲು ತನಿಖಾ ಸಮಿತಿ ರಚಿಸುವಂತೆ ಪಕ್ಷದ ಸಭೆಯಲ್ಲಿ ಮನವಿ ಮಾಡುತ್ತೇವೆ. ಕೇವಲ ಮಂಡ್ಯ, ತುಮಕೂರು ಕ್ಷೇತ್ರ ಮಾತ್ರವಲ್ಲ. ರಾಜ್ಯವ್ಯಾಪಿ ಜೆಡಿಎಸ್ ಸೋಲಿನ ಬಗ್ಗೆ ತನಿಖೆ ನಡೆಸಲು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ್ದ ಜಿಟಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಅವರನ್ನು ಒಪ್ಪಿಸಿಕೊಂಡಿದ್ದು, ಯಾವುದೇ ಸ್ವಂತ ಆಸಕ್ತಿ ಇಲ್ಲ. ಅವರು ದೇಶ ದೇಶ ಅಂತಿದ್ದಾರೆ. ಅದಕ್ಕೆ ಇಷ್ಟು ಪ್ರಚಂಡ ಗೆಲುವು ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಗ್ಗಿ ಬಗ್ಗಿ ನಡೆದವರಿಗೆ ಗೌರವ ಜಾಸ್ತಿ. ತಂದೆ, ತಾಯಿಗೆ ಗೌರವ ಕೊಡಬೇಕು. ಮೋದಿ ಕೂಡ ತಾಯಿಗೆ ನಮಸ್ಕಾರ ಮಾಡುವುದನ್ನು ಮಾಧ್ಯಮದಲ್ಲಿ ತೋರಿಸ್ತಾರೆ. ಅವರಲ್ಲಿ ಸಂಸ್ಕಾರ, ಸಂಸ್ಕೃತಿ, ವಿನಯತೆ ಇದೆ ಎಂದು ಜಿಟಿ ದೇವೇಗೌಡ ಹೊಗಳಿದ್ದರು.