ಮೈಸೂರು: ಈವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ ಅಂತ ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆಯಾಗಿತ್ತು. ಹೀಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಇಂದು ಪರಮೇಶ್ವರ್ ಅವರು ನನ್ನೊಂದಿಗೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಚಿವ ಸಂಪುಟದ ಸದಸ್ಯರ ಪ್ರಮಾಣವಚನ ನಂತರ ಗೊತ್ತಾಗಲಿದೆ ಅಂತ ಹೇಳಿದ್ರು.
Advertisement
ಸಾಲ ಮನ್ನಾ ವಿಚಾರದಲ್ಲಿ ಯೂ ಟರ್ನ್, ರೈಟ್ ಟರ್ನ್ ಯಾವುದೂ ಇಲ್ಲ. ಸಾಲ ಮನ್ನಾಕ್ಕೆ ಸಮಯ ಬೇಕು ಅಷ್ಟೇ. ಸಮ್ಮಿಶ್ರ ಸರ್ಕಾರವಾದ ಕಾರಣ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ಪಡೆದು ಆಡಳಿತ ಮಾಡಬೇಕಾಗಿದೆ. ರೈತರ ಸಾಲ ಮನ್ನಾ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ. ರೈತರು ಹಾಗೂ ರೈತ ಮುಖಂಡರು ತಾಳ್ಮೆ ವಹಿಸಬೇಕು. ನಾನು ನೀಡಿದ ವಾಗ್ದಾನಗಳನ್ನು ಈಡೇರಿಸದೇ ಇರುವುದಿಲ್ಲ. ಕುಮಾರಸ್ವಾಮಿ ಜನರ ಮಧ್ಯೆ ಬೆಳೆದವನು, ಅವರಿಗೋಸ್ಕರನೇ ಅಧಿಕಾರಕ್ಕೆ ಬಂದಿರೋದು. ರೈತರ ಪರಿಸ್ಥಿತಿ ಕೇವಲ ಸಾಲ ಮನ್ನಾಕ್ಕೆ ಸೀಮಿತಗೊಳಿಸುವುದಿಲ್ಲ. ಇಸ್ರೇಲ್ ಮಾದರಿಯ ಕೃಷಿ ನೀತಿ ಸೇರಿದಂತೆ ಹಲವಾರು ಸುಧಾರಿತ ಕೃಷಿ ತರುವ ಆಲೋಚನೆ ಇದೆ ಅಂದ್ರು.
Advertisement
Advertisement
ನನ್ನ ಕಾರ್ಯವೈಖರಿ ಎಂದಿನಂತೆಯೇ ಇರುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಇತಿಮಿತಿಗಳ ನಡುವೆ ಉತ್ತಮ ಆಡಳಿತ ನೀಡುವೆ. ಜನಸಾಮಾನ್ಯರಿಗೆ ಸಿಎಂ ಮನೆ ಬಾಗಿಲು ಸದಾ ತೆರದಿರುತ್ತದೆ. ಜನಸಾಮಾನ್ಯರಿಗೆ ನೇರವಾಗಿ ಸ್ಪಂದಿಸುವುದೇ ನನ್ನ ಉದ್ದೇಶವಾಗಿದೆ. ರೈತ ಮುಖಂಡರು ಜಾತಿ ನೆಲೆಯಲ್ಲಿ ಆಲೋಚನೆ ಮಾಡಬಾರದು. ಬಿಜೆಪಿಯವರು ಕರಾಳ ದಿನಾಚರಣೆ ಮಾಡಲಿ, ಅಭ್ಯಂತರವಿಲ್ಲ. ವಿಶ್ವಾಸಮತ ಮುಗಿದ ಮೇಲೆ ರಾಜಕಾರಣ ಬದಿಗಿಟ್ಟು ರಾಜ್ಯ ಕಟ್ಟುವ ಕೆಲಸದಲ್ಲಿ ಅವರು ಭಾಗಿಯಾಗಲಿ ಅಂತ ಅವರು ತಿಳಿಸಿದ್ರು.
Advertisement
ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಎರಡೂ ಮುಂದುವರೆಯಲಿದೆ. ನಾನು ಜನರ ಮುಖ್ಯಮಂತ್ರಿ, ಹೀಗಾಗಿ ಜನರು ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಅದಕ್ಕೂ ವ್ಯವಸ್ಥೆ ಕಲ್ಪಿಸುತ್ತೇನೆ. ಹಿಂದಿನ 20 ತಿಂಗಳ ಅಡಳಿತಕ್ಕಿಂತ ಈಗ ಅತ್ಯುತ್ತಮವಾದ ಆಡಳಿತ ನೀಡುತ್ತೇನೆ. ನನ್ನ ಮೇಲಿನ ಎಲ್ಲಾ ನಿರೀಕ್ಷೆ ಸತ್ಯ ಮಾಡುತ್ತೇನೆ. ಹತ್ತು ಹಲವು ವಿಶೇಷ ಹಾಗೂ ಕನಸಿನ ಯೋಜನೆಗಳನ್ನ ಜಾರಿಗೆ ತರುತ್ತೇನೆ. ಇನ್ನು ಸಿದ್ದರಾಮಯ್ಯ ಪಾತ್ರ ಏನು ಅಂತಾ 2 ದಿನಗಳಲ್ಲಿ ಗೊರತ್ತಾಗುತ್ತೆ ಅಂತ ಅವರು ಹೇಳಿದ್ರು.