ಬೆಂಗಳೂರು: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರೋದಕ್ಕೆ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನಟಿ ತಾರಾ, ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ನನಗೆ ಖುಷಿ ತಂದಿದೆ. ನಾನು ನಟಿಸಿದ ಸಾಕಷ್ಟು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈಗ ಇದು ಕೂಡ ಸೇರ್ಪಡೆ ಆಗಿದೆ. ಹಿಂದೆ ಹಸೀನಾ ಚಿತ್ರಕ್ಕೆ ನನಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ 13 ವರ್ಷದ ನಂತರ ನಾನು ಅಭಿನಯಿಸಿದ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಖುಷಿಯಾಗಿದೆ ಎಂದು ಹೇಳಿದರು.
ಇಂದು 11.30ಕ್ಕೆ ನವದೆಹಲಿಯ ಶಾಸ್ತ್ರಿ ಭವನದಲ್ಲಿ ಶೇಖರ್ ಕಪೂರ್ ಸಾರಥ್ಯದ 10 ಜನರ ತಂಡದ ಭಾರತೀಯ ಚಿತ್ರರಂಗದ ವಿವಿಧ ಭಾಷೆಯ ಚಿತ್ರಗಳಿಗೆ ಪ್ರಶಸ್ತಿಯನ್ನು ಘೋಷಿಸಿದರು. ‘ಹೆಬ್ಬೆಟ್ಟು ರಾಮಕ್ಕ’ ಚಿತ್ರದಲ್ಲಿ ನಟಿ ತಾರಾ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಆರ್ ನಂಜೇಗೌಡ ನಿರ್ದೇಶನ ಮಾಡಿದ್ದಾರೆ.
ಹೆಬ್ಬೆಟ್ಟು ರಾಮಕ್ಕ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರಕ್ಕೆ ಎಸ್.ಎ ಪುಟ್ಟರಾಜು ನಿರ್ಮಿಸಿದ್ದರು. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಬಿ. ಸತೀಶ್ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು. ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ನೀಡಲಾಗಿದೆ.