ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಪೊಲೀಸರು (Mumbai Police) ಹೊಸ ಕೇಸ್ ಒಂದನ್ನು ದಾಖಲಿಸಿದ್ದು, ರಾಜಸ್ಥಾನ (Rajasthan) ಮೂಲದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಬುಂದಿ ಮೂಲದ ಬನ್ವಾರಿಲಾಲ್ ಲಾತುರ್‌ಲಾಲ್ ಗುಜಾರ್ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಗುಜಾರ್ ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ವೀಡಿಯೋ ಒಂದನ್ನು ಹರಿಬಿಟ್ಟಿದ್ದು, ಲಾರೆನ್ಸ್ ಬಿಷ್ಣೋಯಿ (Lawrence Bishnoi), ಗೋಲ್ಡಿ ಬ್ರಾರ್ ಮತ್ತು ಇತರ ಗ್ಯಾಂಗ್ ಸದಸ್ಯರು ನನ್ನೊಂದಿಗಿದ್ದಾರೆ. ಸಲ್ಮಾನ್ ಖಾನ್ ಅವರನ್ನು ನಾನು ಕೊಂದೇ ಕೊಲ್ಲುತ್ತೇನೆ ಎಂದು ಆರೋಪಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸುಪಾರಿ ಕೊಟ್ಟು ತಮ್ಮನನ್ನೇ ಕೊಲ್ಲಿಸಿದ ಅಣ್ಣ – ಹತ್ಯೆಗೈದಿದ್ದ 8 ಆರೋಪಿಗಳು ಅಂದರ್
ಆರೋಪಿಯು ರಾಜಸ್ಥಾನದ ಹೆದ್ದಾರಿಯೊಂದರಲ್ಲಿ ವಿಡಿಯೋ ಮಾಡಿ ತನ್ನ ಚಾನೆಲ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ತನಿಖೆಗಾಗಿ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು. ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಗುಜಾರ್ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದಾನಾ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ಆತನ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ 506(2) (ಬೆದರಿಕೆಗೆ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಮುಂಬೈನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 14ರ ಮುಂಜಾನೆ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲವು ಸುತ್ತು ಗುಂಡು ಹಾರಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಓರ್ವ ಆರೋಪಿ ಅನುಜ್ ಥಾಪನ್ ಮೇ 1 ರಂದು ಲಾಕಪ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರತ್ಯೇಕ ಪ್ರಕರಣದಲ್ಲಿ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹರಿಯಾಣದ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‍ಗಳ ಸದಸ್ಯ ಸೇರಿದಂತೆ ಐವರನ್ನು ಮುಂಬೈ ಪೊಲೀಸರು ಬಂದಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಪ್ರಕರಣವೊಂದರಲ್ಲಿ ಪ್ರಸ್ತುತ ಗುಜರಾತ್‍ನ ಅಹಮದಾಬಾದ್‍ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ