ಬೆಂಗಳೂರು: ನಾನು ತೆರೆದ ಪುಸ್ತಕ, ನಾನು ಸಾಕಷ್ಟು ವಿಚಾರಣೆ ನೋಡಿದ್ದೇನೆ. ಜಾರಿ ನಿರ್ದೇಶನಾಲಯ(ಇಡಿ), ಸಿಬಿಐ ಕೊಡಬೇಕು ಎಂದು ಇದ್ದರೆ ಕೊಡಲಿ. ನಾನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆದಾಯ ತೆರಿಗೆ ದಾಳಿ ನಡೆದ ಬಳಿಕ ಸೋಮವಾರ ಮಧ್ಯಾಹ್ನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಕುಟುಂಬ ಸಮೇತ ಹಾಜರಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತನಿಖೆಗೆ ನಾನು ನನ್ನ ಕುಟುಂಬದವರು ಸಹಕಾರ ನೀಡಿದ್ದೇವೆ. ನ್ಯಾಯಯುತವಾಗಿ ತನಿಖೆ ನಡೆಯುವ ವಿಶ್ವಾಸವಿದೆ ಎಂದರು.
Advertisement
ನಾವು ಸಂವಿಧಾನ ಒಪ್ಪಿದ್ದೇವೆ. ಕಾನೂನಿಗೆ ಗೌರವ ಕೊಡುತ್ತೇನೆ. ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಯಾವುದನ್ನು ಮುಚ್ಚಿಡಲ್ಲ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡುವುದು ನಮ್ಮ ಕರ್ತವ್ಯ. ಐಟಿ ಅಧಿಕಾರಿಗಳಿಗೆ ನಾವು ಈ ಹಿಂದೆ ನೀಡಿದ ಮಾಹಿತಿ ಸಾಲದೇ ಇದ್ದಿದ್ದಕ್ಕೆ ಇಂದು ನಮ್ಮನ್ನು ವಿಚಾರಣೆಗೆ ಕರೆಸಿದ್ದಾರೆ ಎಂದರು.
Advertisement
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐಟಿ ಬಳಸಿ ನಿಮ್ಮ ವಿರುದ್ಧ ಷಡ್ಯಂತ್ರ ನಡೆಸಿದೆ ಎಂದು ಹೇಳುತ್ತಿರಾ ಎನ್ನುವ ಪ್ರಶ್ನೆಗೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ನನಗೆ ಪಕ್ಷ ಸಂಘಟನೆ ಮಾಡಬೇಕಿತ್ತು. ಆದರೆ ಇದು ನನ್ನ ವೈಯಕ್ತಿಕ ವಿಚಾರವಾಗಿದ್ದ ಕಾರಣ ನಾನು ಹಾಜರಾಗಿದ್ದೇನೆ. ನಾನು ಮಂತ್ರಿಯಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಆದಾಯ ತೆರಿಗೆ ಇಲಾಖೆ, ಚುನವಣಾ ಆಯೋಗಕ್ಕೂ ಲೆಕ್ಕ ಕೊಟ್ಟಿದ್ದೇನೆ. ನನ್ನ ವ್ಯವಹಾರದ ಬದುಕು ಮತ್ತು ರಾಜಕೀಯದ ಬದುಕು ಬೇರೆ, ನಾನು ಯಾವುದಕ್ಕೂ ಹೆದರುವುದಿಲ್ಲ ಎಂದರು.
Advertisement
ನಾಳೆ ನನ್ನನ್ನು ಮಾತ್ರ ವಿಚಾರಣೆಗೆ ಕರೆದಿದ್ದಾರೆ. ಇವತ್ತು ನನ್ನ ಕುಟುಂಬದವರು ಸೇರಿ 15 ಜನ ವಿಚಾರಣೆಗೆ ಹಾಜರಾಗಿದ್ದರು ಎಂದು ಡಿಕೆಶಿ ತಿಳಿಸಿದರು.
Advertisement
ಯಾರೆಲ್ಲ ಹಾಜರಾಗಿದ್ರು?
ಇಂದಿನ ವಿಚಾರಣೆಯಲ್ಲಿ ಡಿಕೆಶಿ ಪತ್ನಿ ಉಷಾ, ಸಹೋದರ ಡಿ ಕೆ ಸುರೇಶ್, ತಾಯಿ ಗೌರಮ್ಮ, ಇಬ್ಬರು ಪುತ್ರಿಯರು ವಿಚಾರಣೆಗೆ ಹಾಜರಾಗಿದ್ದರು. ಶನಿವಾರವೇ ಆದಾಯ ತೆರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ವಿಚಾರಣೆಗೆ ಲೆಕ್ಕ ಪರಿಶೋಧಕರನ್ನು ಜೊತೆಯಲ್ಲಿ ಕರೆತರಬಾರದು ಎಂದು ಸೂಚಿಸಿತ್ತು. ಇಂದು ಐಟಿ ಅಧಿಕಾರಿಗಳು ಎಲ್ಲರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ.
ಎಂಎಲ್‍ಸಿ ರವಿ, ಡಿಕೆಶಿ ಮಾವನ ಮಗ, ಡಿಕೆಶಿ ತಾಯಿ ಗೌರಮ್ಮ ಅವರ ಅಣ್ಣನ ಮಗ, ದವನಂ ಜ್ಯುವೆಲ್ಲರ್ಸ್ ಮಾಲೀಕ ಹರೀಶ್, ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ, ಗ್ಲೋಬಲ್ ಕಾಲೇಜು ನಿರ್ದೇಶಕ ನಂದೀಶ್ ಸೇರಿ ಒಟ್ಟು 15 ಮಂದಿ ವಿಚಾರಣೆಗೆ ಹಾಜರಾಗಿ ಐಟಿ ಅಧಿಕಾರಿಗಳ ಪ್ರಶ್ನೆ ಉತ್ತರ ನೀಡಿದ್ದಾರೆ.