ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್ (Duniya Vijay) ಹಾಗೂ ಲೂಸ್ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್ ಮಾದ ಯೋಗೇಶ್ ಸ್ಪಷ್ಟನೆ ಕೊಟ್ಟಿದ್ದರು. ಇದಕ್ಕೆ ನಟ ದುನಿಯಾ ವಿಜಯ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ದುನಿಯಾ ವಿಜಯ್, ಯೋಗಿ ನನ್ನ ಸ್ವಂತ ಅಕ್ಕನ ಮಗ. ಚಿಕ್ಕ ವಯಸ್ಸಿನಿಂದಲೂ ಅವನನ್ನ ಎತ್ತಿ ಆಡಿಸಿ ಬೆಳೆಸಿದ್ದೇನೆ. ಆ ಪ್ರೀತಿ ಯಾವಾಗಲೂ ಇರುತ್ತೆ. ಎಷ್ಟೇ ದೂರ ಇದ್ದರೂ ಯೋಗಿ ಚೆನ್ನಾಗಿರಲಿ ಅಂತ ಆಶಿಸ್ತೀನಿ ಅಂತ ಹೇಳಿದ್ದಾರೆ.
ಭೀಮಾ ಸಿನಿಮಾದಲ್ಲಿ ನಟನೆ ಮಾಡಬೇಕಿತ್ತು. ಆದ್ರೆ ಆಗಲ್ಲ. ಮುಂದೆ ನನ್ನ ನಿರ್ದೇಶನದಲ್ಲಿ ಯೋಗಿಗೆ ಸಿನಿಮಾ ಮಾಡ್ತೀನಿ. ಒಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಏಕೆಂದರೆ ನಾನು ಕಷ್ಟಪಟ್ಟು ಬಂದಿದ್ದೇನೆ, ಯೋಗಿನೂ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಆದ್ರೆ ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ, ಬೇರೆನಿಲ್ಲ. ಒಂದು ಸ್ಕ್ರಿಪ್ಟ್ ಬಂದಿತ್ತು. ಯೋಗಿ ಸಿನಿಮಾ ಮಾಡಿಸೋಣ ಅಂತ ಹೇಳಿದ್ದೇನೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಯೋಗಿ ಹೇಳಿದ್ದೇನು?
ದುನಿಯಾ ವಿಜಯ್ ಹಾಗೂ ನನಗೆ ಕಿರಿಕ್ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ. ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್ ಹಾಗೂ ನನ್ನ ಫ್ರೆಂಡ್‌ಶಿಪ್ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು.
ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್ ಸಿನಿಮಾಗಳನ್ನೂ ಕೊಟ್ಟರು.