ಚಿಕ್ಕಬಳ್ಳಾಪುರ: ಮದುವೆಯಾಗಿ 8 ವರ್ಷಗಳಾಗಿದ್ದರೂ ಹಳೆಚಾಳಿ ಬೀಡದ ಚಾಲಕಿ ಪತ್ನಿಯೊಬ್ಬಳು ಗಂಡನಿದ್ದರೂ ಪ್ರಿಯಕರನ ಜೊತೆ ಲವ್ವಿ-ಡವ್ವಿ ಇಟ್ಟುಕೊಂಡಿದ್ದಳು. ಬಳಿಕ ತಮ್ಮಿಬ್ಬರ ಪ್ರೀತಿಗೆ ಅಡ್ಡಿಯೆಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದು ಪ್ರಸಿದ್ಧ ಪ್ರವಾಸಿತಾಣವೊಂದರಲ್ಲಿ ಶವ ಸುಟ್ಟು ನಿರಾಳರಾಗಿದ್ದರು. ಆದರೆ ಇದೀಗ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿ ನಿವಾಸಿ ಲಕ್ಷ್ಮಿ, 8 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿ ವೆಂಕಟೇಶನನ್ನು ಮದುವೆಯಾಗಿದ್ದಳು. ಮದುವೆಯಾದರೂ ತನ್ನ ಹಳೆಯ ಪ್ರಿಯಕರ ನಾಗರಾಜ್ ನ ಸಹವಾಸ ಮಾತ್ರ ಬಿಟ್ಟಿರಲಿಲ್ಲ. ಇದರಿಂದ ಅಸಮಧಾನಗೊಂಡಿದ್ದ ವೆಂಕಟೇಶ್ ಪತ್ನಿಗೆ ಬುದ್ಧಿವಾದ ಹೇಳಿದ್ದನು. ಇದರಿಂದ ಆಕ್ರೋಶಗೊಂಡ ಲಕ್ಷ್ಮಿ ತನ್ನ ಪ್ರಿಯಕರ ನಾಗರಾಜನ ಜೊತೆ ಸೇರಿ ಗಂಡನನ್ನು ಕೊಲೆಗೈದು ಶವ ಸುಟ್ಟು ಸಾಕ್ಷಿಗಳಿಲ್ಲದ ಹಾಗೆ ಮಾಡಿದ್ದಳು ಎಂದು ಎಸ್‍ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಗಂಗಾಧರ ಶ್ರೀನಿವಾಸ್ ಕೆಂಪರಾಜ
ಪೊಲೀಸ್ ತನಿಖೆ:
2018ರ ಜೂಲೈ 28 ರಂದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಂಧಿಗಿರಿಧಾಮದ ಕಣಿವೆ ಬಸವಣ್ಣ ದೇವಸ್ಥಾನದ ಬಳಿಯ ಅರಣ್ಯದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ದೊರೆತಿತ್ತು. ಬಳಿಕ ನಂಧಿಗಿರಿಧಾಮ ಠಾಣೆ ಪೋಲಿಸರು ಶವದ ಮೂಳೆಗಳನ್ನು ಆಯ್ದುಕೊಂಡು ಬಂದು, ನಾಪತ್ತೆ ಆದ ವ್ಯಕ್ತಿಗಳ ತನಿಖೆ ನಡೆಸಿದಾಗ ಪತ್ತೆಯಾಗಿದೆ. ಆಗ ವೆಂಕಟೇಶ್ ಕೊಲೆಯಾಗಿದ್ದಾನೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಇತ್ತ ಮಂಚೇನಹಳ್ಳಿ ಪೋಲಿಸ್ ಠಾಣೆಯಲ್ಲಿ ವೆಂಕಟೇಶ್‍ನ ತಾಯಿ ತಿಮ್ಮಕ್ಕ ಸಹ ತನ್ನ ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ತಿಮ್ಮಕ್ಕನ ಬಳಿ ವಿಚಾರ ತಿಳಿದ ಪೋಲಿಸರು, ವೆಂಕಟೇಶ್ ಪತ್ನಿ ಲಕ್ಷ್ಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಆಗ ಲಕ್ಷ್ಮಿ ಪ್ರಿಯಕರ ನಾಗರಾಜ್, ಆತನಿಗೆ ಸಹಕರಿಸಿದ ಕೆಂಪರಾಜ, ಶ್ರೀನಿವಾಸ್, ಗಂಗಾಧರನನ್ನು ಬಂಧಿಸಿದ್ದು, ವಿಚಾರಣೆ ವೇಳೆ ನಡೆದ ಕೃತ್ಯವನ್ನು ಬಾಯಿ ಬಿಟ್ಟಿದ್ದಾರೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಕೊಲೆಗೀಡಾದ ವೆಂಕಟೇಶ್ ಹಾಗೂ ಆರೋಪಿಗಳು ಪರಿಚಯಸ್ಥರೆ ಆಗಿದ್ದರು. ತನ್ನ ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಆಗಾಗ ಜಗಳ ಮಾಡುತ್ತಿದ್ದನು. ಆದ್ದರಿಂದ ಸ್ವತಃ ಆತನ ಪತ್ನಿಯೆ ಕೊಲೆ ಮಾಡಿ ಸುಟ್ಟು ಹಾಕುವಂತೆ ತಿಳಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಆರೋಪಿ ಲಕ್ಷ್ಮಿಗೆ ಮೂರು ತಿಂಗಳ ಮಗು ಇರುವ ಕಾರಣ ಪೋಲಿಸರು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ತಳ್ಳಿದ್ದು, ಲಕ್ಷ್ಮಿಯ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv