Connect with us

Belgaum

ಹೆಂಡ್ತಿ ಚೆನ್ನಾಗಿರಲಿ ಅಂತ ಕಾರ್ ಕೊಡಿಸಿ, ಡ್ರೈವರ್ ನೇಮಿಸಿದ ಸೈನಿಕ ಪತಿ

Published

on

– ಪತಿ ಹೋಗ್ತಿದ್ದಂತೆ ಡ್ರೈವರ್ ಜೊತೆ ಪತ್ನಿಯ ಕಳ್ಳಾಟ
– ರಜೆಗೆ ಬಂದ ಪತಿಯನ್ನ ಕೊಂದೇ ಬಿಟ್ಳು

ಬೆಳಗಾವಿ: ದೇಶ ಕಾಯುವ ಸೈನಿಕನೊಬ್ಬ ಪತ್ನಿ ಹಾಗೂ ಆಕೆಯ ಪ್ರಿಯಕರ ಮಾಡಿದ ಸಂಚಿಗೆ ಬಲಿಯಾಗಿದ್ದಾರೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪತ್ನಿ ಹಾಗೂ ಪ್ರಿಯಕರನ ಕಳ್ಳಾಟ ಬಯಲಾಗಿದ್ದು, ಸದ್ಯ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ದೀಪಕ್ ಪಟ್ಟಣದಾರ್ (32) ಕೊಲೆಯಾದ ಸೈನಿಕ. ದೀಪಕ್ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅಂಜಲಿ ಎಂಬಾಕೆ ಜತೆಗೆ ವಿವಾಹವಾಗಿದ್ದು, ದಂಪತಿಗೆ 2 ವರ್ಷದ ಮಗಳಿದ್ದಾಳೆ. ಕರ್ತವ್ಯದ ಹಿನ್ನೆಲೆಯಲ್ಲಿ ಜಮ್ಮು, ರಾಜಸ್ಥಾನ ಸೇರಿದಂತೆ ದೇಶದ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ ಪತ್ನಿಯನ್ನ ತವರು ಮನೆಯಲ್ಲಿ ಬಿಟ್ಟು, ರಜೆ ಸಿಕ್ಕಾಗ ವರ್ಷಕ್ಕೆ ಒಂದೆರಡು ಬಾರಿ ಬಂದು ಹೋಗುತ್ತಿದ್ದರು.

ಜನವರಿ ಮೂರನೇ ವಾರದಲ್ಲಿ ಯೋಧ ದೀಪಕ್ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಇನ್ನೇನು ನಿವೃತ್ತಿಗೆ 6 ತಿಂಗಳು ಬಾಕಿ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಿವೇಶನ ಖರೀದಿಸಿ ಮನೆಯನ್ನು ಕಟ್ಟಿದ್ದರು. ಪತ್ನಿಗಾಗಿ ಓಡಾಡಲು ಒಂದು ಕಾರ್ ಸಹ ಖರೀದಿ ಮಾಡಿದ್ದರು. ಇದೇ ಕಾರ್ ಯೋಧನ ಬಾಳಲ್ಲಿ ಯಮವಾಗಿ ಬದಲಾಗಿತ್ತು. ಕಾರ್ ಖರೀದಿಯ ನಂತರ ಮನೆಯ ಮುಂದೆಯೇ ಇದ್ದ ಪ್ರಶಾಂತ್ ಪಾಟೀಲ್ ಎಂಬ ಯುವಕನನ್ನು ಚಾಲಕನನ್ನಾಗಿ ನೇಮಕ ಮಾಡಿದ್ದರು. ದೀಪಕ್ ನಿವೃತ್ತಿ ನಂತರ ಪೊಲೀಸ್ ಇಲಾಖೆಯಲ್ಲಿ ಸೇರಿಕೊಳ್ಳಲು ಪರೀಕ್ಷೆ ಬರೆದಿದ್ದರು.

ಡ್ರೈವರ್ ಜೊತೆ ಪತ್ನಿಯ ಅಕ್ರಮ ಸಂಬಂಧ: ಕಾರ್ ಚಾಲಕ ಪ್ರಶಾಂತ್ ಹಾಗೂ ಅಂಜಲಿ ನಡುವೆ ಸಲುಗೆ ಬೆಳೆದಿದೆ. ಇದು ಕೆಲವೇ ತಿಂಗಳುಗಳಲ್ಲಿ ಅನೈತಿಕ ಸಂಬಂಧವಾಗಿ ಮಾರ್ಪಡಿದೆ. ವರ್ಷಕ್ಕೆ ಒಮ್ಮೆ, ಎರಡು ಸಲ ಬರುತ್ತಿದ್ದ ಯೋಧ ಒಂದು 20ರಿಂದ 30 ದಿನವಿದ್ದು ವಾಪಾಸ್ ಹೋಗುತ್ತಿದ್ದರು. ದೀಪಕ್ ಹೋದ ಬಳಿಕ ಅಂಜಲಿ ಹಾಗೂ ಪ್ರಶಾಂತ್ ಆಡಿದ್ದೇ ಆಟವಾಗಿತ್ತು. ಆದರೆ ಈ ಬಾರೀ ರಜೆಗೆ ಬಂದ ಯೋಧ ಕೆಲವೇ ದಿನಗಳಲ್ಲಿ ಸೈನ್ಯದಿಂದ ನಿವೃತ್ತಿಯಾಗಿ ಇಲ್ಲಿಯೆ ಬಂದು ಉಳಿಯುತ್ತೇನೆ ಎಂದು ಪತ್ನಿಯ ಬಳಿ ಹೇಳಿಕೊಂಡಿದ್ದರು.

ಪತ್ನಿ ಹಾಗೂ ಕಾರ್ ಚಾಲಕನ ನಡುವೆ ಅನೈತಿಕ ಸಂಬಂಧದ ಬಗ್ಗೆ ಸಹ ಸಣ್ಣ ಸುಳಿವು ದೀಪಕ್‍ಗೆ ಸಿಕ್ಕಿತ್ತು. ಈ ಬಗ್ಗೆ ಪತ್ನಿ ಜತೆಗೆ ಜಗಳವಾಡಿದ ಯೋಧ ಇದನ್ನೆಲ್ಲ ಬಿಟ್ಟು ಬಿಡುವಂತೆ ಸಹ ತಾಕೀತು ಮಾಡಿದ್ದರು. ಇದು ಪತ್ನಿಗೆ ಇನ್ನಿಲ್ಲದ ಸಮಸ್ಯೆಯನ್ನು ಉಂಟು ಮಾಡಿತ್ತು. ನಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಪತಿಯನ್ನು ಹತ್ಯೆಗೆ ಅಂಜಲಿ ಹಾಗೂ ಕಾರು ಚಾಲಕ ಪ್ರಶಾಂತ್ ಸಂಚು ರೂಪಿಸಿದ್ದರು. ಹತ್ಯೆಗೆ ಸಂಚು ರೂಪಿಸಿದ್ದ ಅಂಜಲಿ ಮತ್ತು ಪ್ರಶಾಂತ್ ನಾಲ್ಕು ತಿಂಗಳಿನಿಂದ ದೀಪಕ್ ಆಗಮನಕ್ಕಾಗಿ ಕಾಯುತ್ತಿದ್ದರು.

ಕೊಲೆಗೆ ಪಕ್ಕಾ ಪ್ಲಾನ್: ದೀಪಕ್ ಹತ್ಯೆಗೆ ಸಂಚು ರೂಪಿಸಿದ್ದಾಗಿನಿಂದ ಅಂಜಲಿ ಮತ್ತು ಪ್ರಶಾಂತ್ ಸೋಶಿಯಲ್ ಮೀಡಿಯಾ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಹತ್ಯೆಯಾದ ದಿನ ಮೊಬೈಲ್ ಗಳನ್ನು ಬೇರೊಂದು ಕಾರ್ ನಲ್ಲಿರಿಸಿದ್ದರು. ಅಂದು ಕಾರ್ ಕೆಲಸದ ನಿಮಿತ್ ಬೆಂಗಳೂರಿಗೆ ಹೋಗಿತ್ತು. ಪ್ರಶಾಂತ್ ಗೆಳೆಯರಿಬ್ಬರು ಹತ್ಯೆಗೆ ಕೈಜೋಡಿಸಿದ್ದರು.

ಜನವರಿ 28ರಂದು ಯೋಧನಿಗೆ ಗೋಕಾಕ್ ತಾಲೂಕಿನ ಗೊಡಚನಮಲ್ಕಿ ಫಾಲ್ಸ್ ಗೆ ಹೋಗಿ ಬರೋಣ ಎಂದು ಪತ್ನಿ ಒತ್ತಾಯ ಮಾಡಿದ್ದಳು. ಪತ್ನಿ ಅಂಜಲಿ, ಪ್ರಶಾಂತ್ ಹಾಗೂ ಯೋಧ ದೀಪಕ್ ಎಲ್ಲರೂ ಸೇರಿಕೊಂಡು ಸ್ವತಃ ಕಾರಿನಲ್ಲಿ ಗೊಡಚನಮಲ್ಕಿ ಫಾಲ್ಸ್‍ಗೆ ತೆರೆಳಿದ್ದರು. ಫಾಲ್ಸ್ ಹೋಗುವ ಮೊದಲೇ ಪ್ರಶಾಂತ ಸ್ನೇಹಿತರು ಹಾಗೂ ದೀಪಕ್ ಜೊತೆ ಮದ್ಯ ಸೇವನೆಗೆ ಆರಂಭಿಸುತ್ತಾರೆ. ಫಾಲ್ಸ್ ಹೋದ ಬಳಿಕ ಆತನನ್ನು ಹತ್ಯೆ ಮಾಡಿ ಶವವನ್ನು ಬಿಸಾಡಿ ಬಂದಿದ್ದಾರೆ. ಮೊದಲಿಗೆ ದೀಪಕ್ ನನ್ನು ಫಾಲ್ಸ್ ಮೇಲಿಂದ ತಳ್ಳಲು ಮೊದಲು ಯತ್ನಿಸಿದ್ದಾರೆ. ಆದರೇ ಸಾಧ್ಯವಾಗದೇ ಇದ್ದಾಗ ಚಾಕುವಿನಿಂದ ಕತ್ತು ಕೊಯ್ದು ಹತ್ತೆ ಮಾಡಿದ್ದಾರೆ. ಹೀಗೆ ಬಂದ ಬಳಿಕ ಇದನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ಲ್ಯಾನ್ ಸಹ ಅಂಜಲಿ ಹಾಗೂ ಆಕೆಯ ಪ್ರಿಯಕರ ಸೇರಿ ಮಾಡಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಫೆಬ್ರವರಿ 4ರಂದು ಪತಿ ಕಾಣೆಯಾಗಿದ್ದಾನೆ ಎಂದು ಯೋಧನ ಪತ್ನಿ ಅಂಜಲಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಾದ ಮರು ದಿನವೇ ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಪ್ರತಿಭಟನೆ ಸಹ ಮಾಡಿದ್ದಳು. ಯೋಧನೊಬ್ಬ ನಾಪತ್ತೆಯಾಗಿರೋ ಬಗ್ಗೆ ದೂರು ದಾಖಲಿಸಿಕೊಂಡ ಮಾರಿಹಾಳ ಪೊಲೀಸರು ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸುತ್ತಾರೆ. ದೂರು ದಾಖಲಿಸುವ ಮೊದಲು ಆರೋಪಿಗಳು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಶವ ಇದೆಯೋ ಇಲ್ಲವೋ ಎಂದು ನೋಡಲು ಹೋಗಿದ್ದರು. ಅಷ್ಟೊತ್ತಿಗಾಗಲೇ ಯೋಧನ ಶವವನ್ನು ಪ್ರಾಣಿ, ಪಕ್ಷಿಗಳು ತಿಂದು ಮುಗಿಸಿದ್ದವು.

ನಾಲ್ವರು ಹತ್ಯೆಯಾದ ಸ್ಥಳದಿಂದ ವಾಪಾಸ್ ಬರುವಾಗ ಇನ್ನೊಂದು ಸಿಮ್ ಬಳಕೆ ಮಾಡಿದ್ದರು. ಲೋಕೆಶನ್ ಮೂಲಕ ಸಿಮ್ ಬಳಕೆದಾರರನ್ನು ಬೆನ್ನತ್ತಿದಾಗ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಆಗಲೇ ಪತ್ನಿಯ ಹಾಗೂ ಆಕೆಯ ಪ್ರೀಯಕರ ಅಸಲಿಯತ್ತು ಬಯಲಾಗಿದೆ. ಈ ಬಗ್ಗೆ ಅಂಜಲಿ, ಕಾರ್ ಚಾಲಕ ಪ್ರಶಾಂತ್ ಪಾಟೀಲ್ ಇಬ್ಬರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿರ್ಜನ ಅರಣ್ಯ ಪ್ರದೇಶದಲ್ಲಿ ಯೋಧ ದೀಪಕ್ ಹತ್ಯೆ ಮಾಡಿರೋ ಬಗ್ಗೆ ಒಪ್ಪಿಕೊಂಡಿದ್ದಾರೆ.

ಪ್ರಕರಣ ಮುಚ್ಚಿ ಹೋಯಿತು ಅಂದುಕೊಂಡ ಇನ್ನಿಬ್ಬರು ಆರೋಪಿಗಳು ಯೋಧನ ಕಾರು ಮಾರಾಟಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿಯೇ ಇಬ್ಬರು ಅಂಜಲಿ ಹಾಗೂ ಪ್ರಶಾಂತ್ ಬಂಧನ ಬಗ್ಗೆ ಮಾಹಿತಿ ಸಿಕ್ಕಿದೆ. ಕಾರ್ ಅನ್ನು ಅಲ್ಲಿಯೆ ಬಿಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರಿಗಾಗಿ ಮಾಳಮಾರುತಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Click to comment

Leave a Reply

Your email address will not be published. Required fields are marked *